ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಕಣ ಸಜ್ಜು

0
159

ಕೆ.ವಿ.ಪರಮೇಶ್
ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಜಿಲ್ಲಾ, ತಾಲೂಕು ಪಂಚಾಯಿತಿ, ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಹಿಡಿದಿದ್ದ ಚುನಾವಣಾ ಗ್ರಹಣ ನೇಪಥ್ಯಕ್ಕೆ ಸರಿಯುವ ಸ್ಪಷ್ಟ ಲಕ್ಷಣಗಳು ಗೋಚರಿಸುತ್ತಿವೆ. ಚುನಾವಣೆಗೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗ ಕೂಡಾ ಅಗತ್ಯ ಸಿದ್ಧತೆಯಲ್ಲಿ ತೊಡಗಿವೆ. ಇದರ ಬೆನ್ನಲ್ಲೇ ರಾಜಕೀಯ ಪಕ್ಷಗಳಲ್ಲಿ ಪೈಪೋಟಿಯ ಜತೆಗೆ ಜನಪ್ರತಿನಿಧಿಗಳಾಗಲು ತೀವ್ರ ಲಾಬಿ ಶುರುವಾಗಿದೆ. ಎಲ್ಲ ಸ್ತರದಲ್ಲಿ ಶೇ. 50ರ ಮಹಿಳಾ ಮೀಸಲು ಇದೇ ಚುನಾವಣೆಯಲ್ಲಿ ಜಾರಿಯಾದರೆ ಸ್ಥಳೀಯ ಸಂಸ್ಥೆಗಳು ಮಹಿಳಾ ದರ್ಬಾರಿಗೂ ಸಾಕ್ಷಿಯಾಗಲಿವೆ.

ಅಭ್ಯರ್ಥಿಗಳಾಗಲು ಕಸರತ್ತು: ರಾಜ್ಯದಲ್ಲಿ ಜಿಲ್ಲಾ, ತಾಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆದು 4 ವರ್ಷಗಳೇ ಕಳೆದಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಚುನಾವಣೆ ನಡೆದು 5 ವರ್ಷ ಕಳೆದಿದೆ. ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮೂಲಕ ಐದು ಪಾಲಿಕೆಗಳಾಗಿ ರಚನೆ ಯಾಗಿದೆ. ಜಿಪಂ – ತಾಪಂ ಚುನಾವಣೆ ಜೊತೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೂ ಚುನಾವಣೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆ ನಡೆಸುವ ಕಾರ್ಯಕ್ಕೆ ಆಯೋಗ ತಯಾರಿ ನಡೆಸಿದ್ದರೆ, ರಾಜಕೀಯ ಪಕ್ಷದೊಳಗೆ ಆಕಾಂಕ್ಷಿಗಳ ಬಹುದೊಡ್ಡ ಪಟ್ಟಿಯೇ ಬೆಳೆದಿದೆ.

ಆಡಳಿತಪಕ್ಷ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳಲ್ಲಿ ಪೈಪೋಟಿ ಆರಂಭಗೊಂಡಿದ್ದು, ಆಕಾಂಕ್ಷಿಗಳು ತೆರೆಮರೆಯಲ್ಲಿ ಟಿಕೆಟ್ ಪಡೆಯಲು ಕಸರತ್ತು ನಡೆಸುತ್ತಿದ್ದಾರೆ.

ಮೀಸಲಾತಿ ನಿಗದಿಗೂ ಲಾಬಿ: ಜಿಪಂ ಮತ್ತು ತಾಪಂ. ಚುನಾವಣೆಗೆ ಸರ್ಕಾರ ಮೀಸಲಾತಿ ನಿಗದಿಪಡಿಸಬೇಕಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳಿಗೂ ಮೀಸಲಾತಿ ಪಟ್ಟಿ ಸಿದ್ದವಾಗಬೇಕಿದೆ. ಪ್ರತಿ ಕ್ಷೇತ್ರ ಮತ್ತು ವಾರ್ಡ್‌ಗಳಲ್ಲಿಯೂ ಸ್ಥಳಿಯವಾಗಿ ಪ್ರಬಲವಾಗಿರುವ ನಾಯಕರು ತಮಗೆ ಬೇಕಾದಂತೆ ಸಮುದಾಯವಾರು ಮೀಸಲಾತಿ ನಿಗದಿಗೆ ತಂತ್ರ ರೂಪಿಸುತ್ತಿದ್ದಾರೆ. ಸರ್ಕಾರ ಕೂಡಾ ಗೆಲುವಿನ ಲೆಕ್ಕಾಚಾರದಡಿ ಸ್ಥಳಿಯ ಮುಖಂಡರ ಮಾತಿಗೆ ಮನ್ನಣೆ ಕೊಡಲೇಬೇಕಾಗುತ್ತದೆ. ಮತ್ತೊಂದೆಡೆ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮೀಸಲಾತಿ ನಿಗದಿಗೂ ಲಾಬಿ ನಡೆಯುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಾರ್ಡ್‌ಗಳ ವಿಂಗಡಣೆ ಆಗಿರುವ ಹಿನ್ನೆಲೆಯಲ್ಲಿ ನಿರ್ದಿಷ್ಟ ವಾರ್ಡ್‌ಗಳಿಗೆ ಇಂತಹದ್ದೇ ವರ್ಗಕ್ಕೆ ಮೀಸಲಾತಿ ಕಲ್ಪಿಸುವಂತೆ ರಾಜ್ಯ ನಾಯಕರ ಮೇಲೆ ಒತ್ತಡ ಹಾಕಲಾಗುತ್ತಿದೆ.

ಟಿಕೆಟ್ ಹಂಚಿಕೆ ತಲೆಬಿಸಿ ಶುರು: ಐದಾರು ವರ್ಷಗಳ ಬಳಿಕ ಚುನಾವಣೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಸ್ಪರ್ಧಾಕಾಂಕ್ಷಿಗಳ ಪಟ್ಟಿಯೂ ದೊಡ್ಡದಿದೆ. ಯಾರಿಗೆ ಟಿಕೆಟ್ ನೀಡಬೇಕು ಎಂಬ ತಲೆಬಿಸಿ ಪಕ್ಷಗಳ ನಾಯಕರಿಗೆ ಶುರುವಾಗಿದೆ. ಪಕ್ಷದ ಸಂಘಟನೆಯಲ್ಲಿ ಸಕ್ರಿಯತೆ, ಸ್ಥಳಿಯವಾಗಿ ಜನಪ್ರಿಯತೆ ಮತ್ತು ಗೆಲುವಿನ ಸಾಮರ್ಥ್ಯವನ್ನೇ ಮಾನದಂಡವಾಗಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಪಕ್ಷಗಳು ಈಗಾಗಲೇ ಪೂರ್ವತಯಾರಿ ನಡೆಸಿದೆ. ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಿಕೊಂಡು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ದಪಡಿಸಲು ಸೂಚಿಸಲಾಗಿದೆ.
ಜಿಪಂ – ತಾಪಂನ ಒಂದೊಂದು ಕ್ಷೇತ್ರಕ್ಕೆ ತಲಾ ನಾಲ್ವರು ಸಂಭಾವ್ಯರನ್ನು ಆಯ್ಕೆಮಾಡಿ ಅದರಲ್ಲಿ ಒಬ್ಬರನ್ನು ಅಂತಿಮಗೊಳಿಸುವುದು ಸಧ್ಯದ ಲೆಕ್ಕಾಚಾರವಾಗಿದೆ. ಸ್ಥಳೀಯವಾಗಿ ಅಸಮಾಧಾನ ಶಮನಗೊಳಿಸುವ ಸವಾಲಿನೊಂದಿಗೆ ಆಕಾಂಕ್ಷಿಗಳ ಪಟ್ಟಿ ತಯಾರಿಗೆ ಕಸರತ್ತು ನಡೆದಿದೆ.

ಮತದಾರರಪಟ್ಟಿ ವಿಶೇಷ ಪರಿಷ್ಕರಣೆ ಯಾರಿಂದ ಶುರು ಎಂಬ ಕುತೂಹಲ: ಕರ್ನಾಟಕದಲ್ಲಿ ಮೊದಲು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡುವವರು ಯಾರು? ಕೇಂದ್ರ ಚುನಾವಣಾ ಆಯೋಗ ಮೊದಲೋ? ರಾಜ್ಯ ಚುನಾವಣಾ ಆಯೋಗ ಮೊದಲೋ? ಎಂಬ ಕುತೂಹಲ ಸೃಷ್ಟಿಯಾಗಿದೆ. ರಾಜ್ಯ ಚುನಾವಣಾ ಆಯೋಗ ಮತದಾರರ ಪಟ್ಟಿ ಪರಿಷ್ಕರಣೆಗೆ ಭರ್ಜರಿ ಸಿದ್ಧತೆ ನಡೆಸಿದೆ. ನವೆಂಬರ್ 1ರಿಂದ ಮತದಾರರ ಪಟ್ಟಿ ಪರಿಷ್ಕರಣೆ ಮಾಡುತ್ತೇವೆ. ಕೇಂದ್ರ ಚುನಾವಣಾ ಆಯೋಗ ಎಸ್‌ಐಆರ್ ಮುಂದೂಡಲಿ ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿ ಅವರು ಹೇಳಿರುವುದೇ ಇದಕ್ಕೆ ಸಾಕ್ಷಿ. ಕೇಂದ್ರ ಚುನಾವಣಾ ಆಯೋಗದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಮಾಡಲಿ. ಆದರೆ ರಾಜ್ಯ ಚುನಾವಣಾ ಆಯೋಗಕ್ಕೂ ಅಧಿಕಾರ ಇದೆ. ಈಗಾಗಲೇ ಕೇರಳ, ಉತ್ತರಪ್ರದೇಶದಲ್ಲಿ ಮಾಡಿದ್ದಾರೆನವೆಂಬರ್ ಅಂತ್ಯದೊಳಗೆ ಸುಪ್ರೀಂಕೋರ್ಟ್‌ಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವಾರ್ಡ್ ಮತದಾರರ ಪಟ್ಟಿ ಸಲ್ಲಿಸಬೇಕು. ಹಾಗಾಗಿ ರಾಜ್ಯ ಚುನಾವಣಾ ಆಯೋಗವೇ ಮತದಾರರ ಪಟ್ಟಿ ಪರಿಷ್ಕರಣೆಗೆ ಮುಂದಾಗಿದೆ.

ಹೆಚ್ಚಲಿದೆ ನಾರೀಬಲ: ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನಡೆಯುವ ಚುನಾವಣೆಯಲ್ಲಿ ಶೇ. 50ರಷ್ಟು ಮಹಿಳಾ ಮೀಸಲಾತಿ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಪ್ರಸ್ತಾಪಿತ ವಿಂಗಡಣೆಯಂತೆ 368 ವಾರ್ಡ್ಗಳು ರಚನೆಯಾಗಲಿದೆ. ರಾಜ್ಯದಲ್ಲಿ ಪ್ರಮುಖ ಪಕ್ಷಗಳ ಸ್ಪರ್ಧಾಕಾಂಕ್ಷಿಗಳನ್ನು ಪರಿಗಣಿಸಿದರೆ ಕನಿಷ್ಟ 1500 ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಶೇ. 33ರಷ್ಟಿರುವ ಮೀಸಲು 50%ಗೆ ಏರಿಕೆಯಾದರೆ 2584ರಷ್ಟು ಮಹಿಳೆಯರು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲಿದ್ದಾರೆ.

Previous articleಖ್ಯಾತ ಕಥೆಗಾರ, ನಿವೃತ್ತ ಪ್ರಾಧ್ಯಾಪಕ ಮೊಗಳ್ಳಿ ಗಣೇಶ್ ಇನ್ನಿಲ್ಲ
Next articleನಾವೆಲ್ಲರೂ ಶೂದ್ರರು: ಜಾತಿ ಯಾವುದಾದರೂ ಶೂದ್ರರೆಲ್ಲರೂ ಒಂದೇ

LEAVE A REPLY

Please enter your comment!
Please enter your name here