ನವದೆಹಲಿ: ಮಂಡ್ಯದ ಮದ್ದೂರಿನಲ್ಲಿ ಗಣೇಶ ಮೆರವಣಿಗೆಗೆ ಮಸೀದಿ ಮೇಲ್ಗಡೆಯಿಂದ ಕಲ್ಲು ತೂರಾಟ ನಡೆಸಿರುವುದು ಅಕ್ಷಮ್ಯ ಅಪರಾಧ. ಗಲಭೆ ತಡೆಗಟ್ಟುವ ಯೋಗ್ಯತೆಯೇ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದರು.
ಹಿಂದಿನ ಗಲಭೆ ಪ್ರಕರಣಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರೋತ್ಸಾಹ ಕೊಡುವ ರೀತಿ ನಡೆದುಕೊಂಡಿದ್ದರಿಂದಲೇ ಇಂಥ ಕೃತ್ಯಗಳು ಮರುಕಳಿಸಲು ಕಾರಣ ಎಂದು ಆರೋಪಿಸಿದ್ದಾರೆ.
ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿಲ್ಲ. ಹಾಗಾಗಿಯೇ ಕಲ್ಲು ತೂರಾಟ ನಡೆದಿದೆ. ಇನ್ನು, ಸೋಮವಾರ ಬೆಳಿಗ್ಗೆ ಗಣೇಶ ವಿಸರ್ಜನೆಗೆ ಮುಂದಾದ ಅಮಾಯಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದೆಲ್ಲ ಸರ್ಕಾರದ ಹಿಂದು ವಿರೋಧಿ ಮಾನಸಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಜೋಶಿ ಖಂಡಿದ್ದಾರೆ.
ಧಾರವಾಡದ ನರೇಂದ್ರ ಗ್ರಾಮದಲ್ಲಿ ಅತ್ಯಂತ ಶಾಂತವಾಗಿ ನಡೆಯುತ್ತಿದ್ದ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಹೀಗೆ ಲಾಠಿ ಬೀಸಿದ್ದಾರೆ. ಕೇಳಿದರೆ ಎರಡು ಗಣೇಶ ಮೆರವಣಿಗೆ ಬರುತ್ತಿದ್ದವು ಎಂದಿದ್ದಾರೆ. ಇದ್ಯಾವ ನೀತಿ? ಎರಡು ಮೆರವಣಿಗೆ ಬರಬಾರದೇ? ಎಂದು ಪ್ರಶ್ನಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ರೈತರು, ಹಿಂದುಪರ ಹೋರಾಟಗಾರರು ಹಾಗೂ ಅಮಾಯಕ ಅಧಿಕಾರಿಗಳ ಮೇಲೆ ದರ್ಪ ತೋರುತ್ತದೆ. ಆದರೆ, ಗಣೇಶ ಹಬ್ಬ ಹಾಗೂ ಹಿಂದುಗಳ ಹಬ್ಬದಾಚರಣೆ ವೇಳೆ ಕಾಲು ಕೆದರಿಕೊಂಡು ಬರುವವರ ಮೇಲೇಕೆ ದರ್ಪ ತೋರುವುದಿಲ್ಲ? ಎಂದು ಪ್ರಲ್ಹಾದ ಜೋಶಿ ಪ್ರಶ್ನಿಸಿದ್ದಾರೆ.
ಶಾಸಕ ಟೆಂಗಿನಕಾಯಿ ಖಂಡನೆ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ಉತ್ಸವದ ಮೆರವಣಿಗೆ ಸಂದರ್ಭದಲ್ಲಿ ಒಂದು ಕೋಮಿನವರು ಮಸೀದಿ ಎದುರುಗಡೆ ಮೆರವಣಿಗೆ ಸಾಗುತ್ತಿರುವಾಗ ಕಲ್ಲುಗಳನ್ನು ತೂರಿ ಶಾಂತಿ ಭಂಗ ಉಂಟು ಮಾಡಿದ್ದು, ಇದೊಂದು ಪೂರ್ವ ನಿಯೋಜಿತ ಕೃತ್ಯ. ಮುಖ್ಯಮಂತ್ರಿಗಳ ಅಡಿಯಲ್ಲಿರುವ ಗುಪ್ತಚರ ಇಲಾಖೆ ನಿದ್ದೆ ಮಾಡುತ್ತಿದೆಯೇ ಎಂದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಪ್ರಶ್ನಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಇದಕ್ಕೆಲ್ಲ ಕಾರಣ ರಾಜ್ಯ ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯಾಗಿದೆ. ಶಾಸಕರು ವಿದೇಶಕ್ಕೆ ಹೋದರೆ, ಸಚಿವರು ಸೋಮವಾರ ಸಂಜೆ ಭೇಟಿ ನೀಡಿದ್ದಾರೆ. ಬೇಜವಾಬ್ದಾರಿ ಸಚಿವರು ಸಂಪುಟದಲ್ಲಿದ್ದಾರೆ. ಸರಕಾರದ ಮುಸ್ಲಿಂ ತುಷ್ಟೀಕರಣವೇ ಇದೆಲ್ಲದಕ್ಕೂ ಕಾರಣ ಎಂದಿದ್ದಾರೆ.ಮುಂದಿನ ದಿನಮಾನಗಳಲ್ಲಿ ಹಿಂದುಗಳು ಹೋರಾಟಕ್ಕೆ ಇಳಿದರೆ ಸರ್ಕಾರವೇ ಬಿದ್ದು ಹೋಗಲಿದೆ ಎಂದಿದ್ದಾರೆ.