ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ, ಎ2 ಆರೋಪಿ ದರ್ಶನ್ ಸೇರಿ 7 ಜನರ ಜಾಮೀನು ರದ್ದಾಗುತ್ತಿದ್ದಂತೆ ಪೊಲೀಸರು ಆರೋಪಿಗಳ ಬಂಧನಕ್ಕೆ ಮುಂದಾಗಿದ್ದಾರೆ.
ಬೆಂಗಳೂರಿನ ಆರ್‌ಆರ್ ನಗರದಲ್ಲಿನ ಎ1 ಆರೋಪಿ ಪವಿತ್ರಾ ಗೌಡ ನಿವಾಸಕ್ಕೆ ತೆರಳಿದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ಅಲ್ಲದೇ ನಟ ದರ್ಶನ್ ಆಪ್ತ ಎ14 ಪ್ರದೂಷ್, ಎ5 ನಾಗರಾಜ್ ಮತ್ತು ಎ6 ಲಕ್ಷ್ಮಣ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಪವಿತ್ರಾ ಪೋಸ್ಟ್ ವೈರಲ್: ಸುಪ್ರೀಂ ಕೋರ್ಟ್ ತೀರ್ಪಿಗೂ ಮುನ್ನ ಪವಿತ್ರಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದು ವೈರಲ್ ಆಗಿತ್ತು. ಅದರಲ್ಲಿ ತಮಗೆ ನ್ಯಾಯ ಸಿಗುವ ಭರವಸೆಯನ್ನು ಪವಿತ್ರಾ ವ್ಯಕ್ತಪಡಿಸಿದ್ದರು. ಪೋಸ್ಟ್‌ನಲ್ಲಿ ಅವರು ‘ಸತ್ಯ ಎಲ್ಲಕ್ಕಿಂತ ಶಕ್ತಿಶಾಲಿಯಾಗಿದೆ. ನ್ಯಾಯ ಸಿಕ್ಕೇ ಸಿಗುತ್ತೆ’ ಎಂದು ಬರೆದುಕೊಂಡಿದ್ದರು.
ಆದರೆ ಸುಪ್ರೀಂ ಕೋರ್ಟ್ ಜಾಮೀನು ರದ್ದುಗೊಳಿಸಿ ಆದೇಶ ಹೊರಡಿಸುತ್ತಿದ್ದಂತೆ ಪವಿತ್ರಾ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಎಲ್ಲಾ 7 ಜನ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ. ಇದರಿಂದಾಗಿ ಜಾಮೀನು ಪಡೆದ ಹೊರಗಿದ್ದ ಎಲ್ಲರೂ ಮತ್ತೇ ಜೈಲು ಪಾಲಾಗಲಿದ್ದಾರೆ.
ಸುಪ್ರೀಂಕೋರ್ಟ್ ಹೇಳಿದ್ದೇನು?: ಇದೊಂದು ಮಹತ್ವದ ತೀರ್ಪು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿಯೇ ಹೇಳಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಎ1 ಪವಿತ್ರಾ ಗೌಡ, ಎ2 ದರ್ಶನ್, ಎ6 ಜಗದೀಶ್, ಎ7 ಅನು ಕುಮಾರ್, ಎ14 ಪ್ರದೋಶ್, ಎ11 ನಾಗರಾಜು ನಾಗ, ಎ12 ಲಕ್ಷ್ಮಣ್ ಜಾಮೀನು ರದ್ದುಗೊಂಡಿದೆ.
ಸರ್ಕಾರ ತನ್ನ ಮೇಲ್ಮನವಿಯಲ್ಲಿ ದರ್ಶನ್‌ಗೆ ಈ ಹಿಂದೆ ಕೂಡ ಅಪರಾಧ ಹಿನ್ನೆಲೆ ಇದೆ. ಬೆನ್ನು ನೋವು ಎಂದು ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯಿತಿ ಪಡೆದಿದ್ದಾರೆ. ಆದರೆ ಮರು ದಿನ ಚಿತ್ರ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ ಎಂದು ಸರ್ಕಾರ ವಾದಿಸಿತ್ತು.