Home Advertisement
Home ಸುದ್ದಿ ರಾಜ್ಯ ಮೈಸೂರು ಸಿಲ್ಕ್ ಕಾರ್ಖಾನೆ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರದ ಸ್ಪಷ್ಟನೆ

ಮೈಸೂರು ಸಿಲ್ಕ್ ಕಾರ್ಖಾನೆ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರದ ಸ್ಪಷ್ಟನೆ

0
66
ರೇಷ್ಮೆ ಕಾರ್ಖಾನೆ ಕುರಿತಂತೆ ಸಂಯುಕ್ತ ಕರ್ನಾಟಕದಲ್ಲಿ ಜಾಗೃತಿ : ಇದಕ್ಕೂ ಮಧ್ಯೆ, ಮೈಸೂರು ಸಿಲ್ಕ್ ಸೀರೆಗಳ ಮಾರಾಟ ನಿಂತುಹೋಗುತ್ತದೆ ಅಥವಾ ಕಾರ್ಖಾನೆ ಮುಚ್ಚುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ “ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?” ಎಂಬ ವಿಶೇಷ ದೃಶ್ಯ ಪ್ರಸಾರದ ಮೂಲಕ ಮೈಸೂರು ರೇಷ್ಮೆ ಕಾರ್ಖಾನೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು.

ಬೆಂಗಳೂರು: ಮೈಸೂರು ರೇಷ್ಮೆ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಕುರಿತು ಉದ್ಭವಿಸಿದ್ದ ವಿವಾದಕ್ಕೆ ಅಂತ್ಯವಿದ್ದು, ಸರ್ಕಾರ ಆ ಯೋಜನೆಯನ್ನು ಕೈಬಿಟ್ಟಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದರು.

Karnataka Silk Industries Corporation (KSIC)ಗೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆ ಬಗ್ಗೆ ಪ್ರತಿಪಕ್ಷದಿಂದ ಪ್ರಶ್ನೆಗಳು ಎದ್ದಿದ್ದ ಹಿನ್ನೆಲೆಯಲ್ಲಿ ಸಚಿವರು ಈ ವಿಷಯವನ್ನು ವಿವರಿಸಿದರು. ಮೈಸೂರು ರೇಷ್ಮೆ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ಪ್ರಸ್ತಾವನೆಗೆ ಈಗ ಸರ್ಕಾರ ಅಂತಿಮವಾಗಿ ಬ್ರೇಕ್ ಹಾಕಿದೆ ಎಂದು ಅವರು ತಿಳಿಸಿದರು.

ವಿಧಾನಸಭೆಯಲ್ಲಿ ತೀವ್ರ ಚರ್ಚೆ: ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಶ್ರೀವತ್ಸ ಅವರು ಮೈಸೂರು ರೇಷ್ಮೆ ಸೀರೆಗಳಿಗೆ ಹೆಚ್ಚುತ್ತಿರುವ ಬೇಡಿಕೆ ಕುರಿತು ಪ್ರಶ್ನೆ ಕೇಳಿದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್‌ ಅಶೋಕ್‌ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಇತಿಹಾಸ ಹೊಂದಿರುವ ಹಾಗೂ ವರ್ಷಕ್ಕೆ ಸುಮಾರು ₹96 ಕೋಟಿ ಲಾಭ ಗಳಿಸುವ ಕರ್ನಾಟಕ ರಾಜ್ಯ ರೇಷ್ಮೆ ನಿಗಮವನ್ನು ಮುಚ್ಚುವ ಪ್ರಯತ್ನ ನಡೆಯುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದರು.

ಮೈಸೂರು ರೇಷ್ಮೆ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ವರದಿಗಳು ಹೊರಬಂದಿದ್ದವು. ಇದು ಸರಿಯಲ್ಲ; ಕೂಡಲೇ ಕ್ರೀಡಾಂಗಣ ನಿರ್ಮಾಣ ಯೋಜನೆಯನ್ನು ಕೈಬಿಟ್ಟು ಕಾರ್ಖಾನೆಯನ್ನು ಉಳಿಸಬೇಕು ಎಂದು ಅಶೋಕ್ ಒತ್ತಾಯಿಸಿದರು.

‘ತಪ್ಪು ಮಾಹಿತಿ ನೀಡಲಾಗಿತ್ತು’ : ಈ ಬಗ್ಗೆ ಉತ್ತರಿಸಿದ ಸಚಿವ ವೆಂಕಟೇಶ್, ಕೆಲವು ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ ರೇಷ್ಮೆ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಿಸಬಹುದು ಎಂದು ಸಲಹೆ ನೀಡಿದ್ದರು ಎಂದು ಹೇಳಿದರು. ಆದರೆ ವಾಸ್ತವ ಸ್ಥಿತಿ ತಿಳಿದ ಬಳಿಕ ಮುಖ್ಯಮಂತ್ರಿ ಆ ಪ್ರಸ್ತಾವನೆಯನ್ನು ಒಪ್ಪಿಲ್ಲ ಮತ್ತು ಕ್ರೀಡಾಂಗಣ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೈಸೂರು ರೇಷ್ಮೆ ಸೀರೆಗಳಿಗೆ ಹೆಚ್ಚಿದ ಬೇಡಿಕೆ: ಸಚಿವರು ಮತ್ತಷ್ಟು ವಿವರಿಸುತ್ತಾ, ರಾಜ್ಯದ ಪ್ರಸಿದ್ಧ Mysore Silk Sareeಗಳಿಗೆ ದೇಶ-ವಿದೇಶಗಳಿಂದ ಬೇಡಿಕೆ ಹೆಚ್ಚುತ್ತಿದೆ ಎಂದು ಹೇಳಿದರು. ಆದರೆ ಪ್ರಸ್ತುತ ಕಾರ್ಖಾನೆಯಲ್ಲಿ ದಿನಕ್ಕೆ 300ರಿಂದ 350 ಸೀರೆಗಳು ಮಾತ್ರ ಉತ್ಪಾದನೆಯಾಗುತ್ತಿವೆ.

ಮೈಸೂರು ರೇಷ್ಮೆ ಸೀರೆಗಳು ಉತ್ತಮ ಗುಣಮಟ್ಟಕ್ಕೆ ಹೆಸರಾಗಿದ್ದು, ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಖರೀದಿಸಿ ಸೀರೆಗಳನ್ನು ತಯಾರಿಸಲಾಗುತ್ತಿದೆ. ರೇಷ್ಮೆ ಗೂಡುಗಳಿಗೂ ಹಾಗೂ ಸೀರೆಗಳಿಗೂ ಉತ್ತಮ ಬೇಡಿಕೆ ಇರುವುದರಿಂದ ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ವಿಸ್ತರಿಸಿ ಉತ್ಪಾದನೆಯನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆನ್‌ಲೈನ್ ಮಾರಾಟ ನಿಲ್ಲಿಸುವ ಚಿಂತನೆ : ಮೈಸೂರು ರೇಷ್ಮೆ ಸೀರೆಗಳಿಗೆ ಆನ್‌ಲೈನ್‌ ಮೂಲಕವೂ ದೊಡ್ಡ ಮಟ್ಟದಲ್ಲಿ ಬೇಡಿಕೆ ಹೆಚ್ಚುತ್ತಿರುವುದರಿಂದ ಸ್ಥಳೀಯ ಗ್ರಾಹಕರಿಗೆ ಸೀರೆಗಳು ಲಭ್ಯವಾಗುವಂತೆ ಮಾಡಲು ಆನ್‌ಲೈನ್ ಮಾರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸುವ ಕುರಿತು ಚಿಂತನೆ ನಡೆಯುತ್ತಿದೆ ಎಂದು ಸಚಿವರು ತಿಳಿಸಿದರು.

ನೇಕಾರರ ವೇತನ ವಿಚಾರ: ಮೈಸೂರು ರೇಷ್ಮೆ ಕಾರ್ಖಾನೆಯಲ್ಲಿ ತರಬೇತಿ ಪಡೆಯುವ ನೇಕಾರರಿಗೆ ತಿಂಗಳಿಗೆ ₹3,000 ಗೌರವಧನ ನೀಡಲಾಗುತ್ತಿದೆ. ಪೂರ್ಣಾವಧಿ ನೌಕರರಿಗೆ ಸುಮಾರು ₹15,000 ವೇತನ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದರು.

ಈ ವೇಳೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿ, ನಿಗಮವು ವರ್ಷಕ್ಕೆ ₹96 ಕೋಟಿ ಲಾಭ ಮಾಡುತ್ತಿರುವುದರಿಂದ ಕನಿಷ್ಠ ₹1 ಕೋಟಿ ಹಣವನ್ನು ನೇಕಾರರ ವೇತನ ಹೆಚ್ಚಿಸಲು ಬಳಸಬಹುದು ಎಂದು ಸಲಹೆ ನೀಡಿದರು.

ರೇಷ್ಮೆ ಕಾರ್ಖಾನೆ ಕುರಿತಂತೆ ಸಂಯುಕ್ತ ಕರ್ನಾಟಕದಲ್ಲಿ ಜಾಗೃತಿ : ಇದಕ್ಕೂ ಮಧ್ಯೆ, ಮೈಸೂರು ಸಿಲ್ಕ್ ಸೀರೆಗಳ ಮಾರಾಟ ನಿಂತುಹೋಗುತ್ತದೆ ಅಥವಾ ಕಾರ್ಖಾನೆ ಮುಚ್ಚುತ್ತದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಈ ಕುರಿತು ಸಂಯುಕ್ತ ಕರ್ನಾಟಕ ಯೂಟ್ಯೂಬ್ ಚಾನೆಲ್‌ನಲ್ಲಿ “ಮೈಸೂರು ಸಿಲ್ಕ್ ಸೀರೆ: ನಾರಿಯರಿಗೆ ಇನ್ನು ಕನಸು?” ಎಂಬ ವಿಶೇಷ ದೃಶ್ಯ ಪ್ರಸಾರದ ಮೂಲಕ ಮೈಸೂರು ರೇಷ್ಮೆ ಕಾರ್ಖಾನೆ ಕುರಿತಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿತ್ತು.