ಮೊಂಥಾ ಚಂಡಮಾರುತ: ರಾಜ್ಯದ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

0
50

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ʼಮೊಂಥಾʼ ಚಂಡಮಾರುತ ರಾಜ್ಯದ ಹವಾಮಾನದಲ್ಲೂ ಪರಿಣಾಮ ಬೀರಿದ್ದು, ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಹವಾಮಾನ ಇಲಾಖೆ 12 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದೆ.

ಚಂಡಮಾರುತದ ಪ್ರಭಾವದಿಂದ ಉತ್ತರ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯವರೆಗೆ ಸಾಧ್ಯತೆ ಇದೆ.

ಹವಾಮಾನ ಇಲಾಖೆಯ ವರದಿ ಪ್ರಕಾರ, ಗದಗ, ಧಾರವಾಡ, ಹಾವೇರಿ, ಬೆಳಗಾವಿ, ಕೊಪ್ಪಳ, ರಾಯಚೂರು, ಬಾಗಲಕೋಟೆ, ವಿಜಯಪುರ, ಬೀದರ್, ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಇದಲ್ಲದೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಕರಾವಳಿ ಜಿಲ್ಲೆಗಳಲ್ಲಿ 30 ರಿಂದ 40 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದೆ.

ಬೀದರ್, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಸುರಿಯುವ ನಿರೀಕ್ಷೆಯಿದೆ. ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಬಹುದು.
ಇದೇ ವೇಳೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ.

ʼಮೊಂಥಾʼ ಚಂಡಮಾರುತವು ಪಶ್ಚಿಮ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ತೀವ್ರಗೊಂಡು, ಉತ್ತರ–ವಾಯುವ್ಯ ದಿಕ್ಕಿಗೆ ಚಲಿಸುತ್ತಿದ್ದು, ಮಂಗಳವಾರ (ಅ.28) ರಾತ್ರಿ ವೇಳೆಗೆ ಆಂಧ್ರಪ್ರದೇಶದ ಮಚಲಿಪಟ್ಟಣಂ ಮತ್ತು ಕಳಿಂಗಪಟ್ಟಣಂ ನಡುವಿನ ಕರಾವಳಿ ಪ್ರದೇಶಕ್ಕೆ ನೆಲಕ್ಕೆ ಅಪ್ಪಳಿಸಿದೆ.

ಈ ವೇಳೆ ಗಾಳಿಯ ವೇಗವು ಗಂಟೆಗೆ 90 ರಿಂದ 100 ಕಿ.ಮೀ., ಗರಿಷ್ಠ 110 ಕಿ.ಮೀ. ತನಕ ದಾಖಲಾಗಿತ್ತು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ಜನರಿಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

Previous articleಸುರಂಗಕಿಂತ ಈ 5 ಐಡಿಯಾಗಳೇ ಬೆಸ್ಟ್: ಬೆಂಗಳೂರು ಟ್ರಾಫಿಕ್‌ಗೆ ತೇಜಸ್ವಿ ಕೊಟ್ಟ ಮಾಸ್ಟರ್‌ ಪ್ಲಾನ್!
Next articleಮಾಜಿ ಶಾಸಕ ಗೋಪಾಲ ಪೂಜಾರಿಗೆ ಹೃದಯ ಚಿಕಿತ್ಸೆ

LEAVE A REPLY

Please enter your comment!
Please enter your name here