ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರೇರಿತವಾದ ಟಿಪ್ಪು ಗ್ಯಾಂಗ್‌ನಿಂದ ರಾಜ್ಯಾದ್ಯಂತ ದುಷ್ಕೃತ್ಯಗಳು ನಡೆಯುತ್ತಿವೆ. ಆದ್ದರಿಂದ ಹಿಂದೂಗಳ ರಕ್ಷಣೆಗಾಗಿ ಬಿಜೆಪಿಯಿಂದ ಹೋರಾಟ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದರು.
ಮದ್ದೂರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟದ ಘಟನೆ ಕುರಿತು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗಣಪತಿಯನ್ನು ಸಂಕಷ್ಟಹರ, ವಿಘ್ನ ವಿನಾಶಕ ಎಂದು ಪೂಜಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಗಣೇಶನಿಗೇ ಸಂಕಟ ತಂದಿದ್ದಾರೆ. ಇಂತಹ ಮನೆಹಾಳು ಕಾಂಗ್ರೆಸ್ಸಿಗರು ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುತ್ತಾರೆ ಎಂದು ಆರೋಪಿಸಿದರು.
ಕಳೆದ ವರ್ಷ ನಾಗಮಂಗಲದಲ್ಲಿ ಇದೇ ರೀತಿಯ ಘಟನೆ ನಡೆದು, ಗಣೇಶನನ್ನೇ ಪೊಲೀಸ್ ಠಾಣೆಗೆ ಹೊತ್ತೊಯ್ದಿದ್ದರು. ಮಂಡ್ಯದಲ್ಲಿ ಹನುಮ ಧ್ವಜ ಹಾರಾಟಕ್ಕೆ ಅವಕಾಶ ನೀಡಿರಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಮತಾಂಧರ ಟೂಲ್ ಕಿಟ್ ಬಹಳ ಕ್ರಿಯಾಶೀಲವಾಗಿದೆ ಎಂದರು.
ಮಂಗಳವಾರ ಮದ್ದೂರು ಬಂದ್‌ಗೆ ಕರೆ ನೀಡಲಾಗಿದೆ ಎಂಬ ಮಾಹಿತಿ ಬಂದಿದೆ. ನಾನು ಕೂಡ ಬಂದ್‌ಗೆ ಕರೆ ನೀಡಿರುವವರ ಜೊತೆ ಚರ್ಚಿಸಿ ಹೋರಾಟ ಮಾಡುತ್ತೇನೆ. ಸರ್ಕಾರಕ್ಕೆ ಎಚ್ಚರಿಕೆ ನೀಡಲು ಹೋರಾಟ ಮಾಡಲಿದ್ದೇವೆ ಎಂದರು.
ಮಸೀದಿಗೆ ಕಲ್ಲು ಹೊಡೆಸಲು ನಾನೇನು ಪಾಕಿಸ್ತಾನದಿಂದ ಬಂದಿಲ್ಲ. ಕಲ್ಲು ಹೊಡೆದವರ ವಿರುದ್ಧ ಪೊಲೀಸರು ಕ್ರಮ ವಹಿಸಿಲ್ಲ. ಒಂದು ವೇಳೆ ಪ್ರಕರಣ ದಾಖಲಿಸಿದರೂ, ಆ ಕೇಸುಗಳನ್ನು ವಾಪಸ್ ಪಡೆಯುತ್ತಾರೆ. ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಕೇಸುಗಳನ್ನು ವಾಪಸ್ ಪಡೆಯಲಾಗಿದೆ. ಧರ್ಮಸ್ಥಳದ ಪರ ಹೋರಾಟ ಮಾಡಿದಂತೆ, ಮಂಡ್ಯ, ಮೈಸೂರು, ಮಲೆನಾಡು ಭಾಗದಲ್ಲಿ ಹಿಂದೂಗಳ ಪರವಾಗಿ ಹೋರಾಟ ಮಾಡುತ್ತೇವೆ ಎಂದರು.