ಬೆಂಗಳೂರು: ಮಹಿಳಾ ನೌಕರರಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಮಂಗಳವಾರ ನೀಡಿದ್ದ ತನ್ನದೇ ತಡೆಯಾಜ್ಞೆಯನ್ನು ಕರ್ನಾಟಕ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವು ಕೆಲವೇ ಗಂಟೆಗಳ ಅಂತರದಲ್ಲಿ ಹಿಂದಕ್ಕೆ ಪಡೆದ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ.
ಸರ್ಕಾರದ ಈ ಅಧಿಸೂಚನೆಯನ್ನು ಪ್ರಶ್ನಿಸಿ ಬೆಂಗಳೂರು ಹೋಟೆಲುಗಳ ಸಂಘದ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರಿದ್ದ ಪೀಠವು ಬೆಳಗಿನ ಕಲಾಪದಲ್ಲಿ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠವು ಆರಂಭದಲ್ಲಿ ಅಧಿಸೂಚನೆಗೆ ಮಧ್ಯಂತರ ತಡೆ ನೀಡಿ, ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿತು. ಬೆಳಗ್ಗೆ ತಡೆ ಆದೇಶ ಹೊರಬಿದ್ದ ಕೂಡಲೇ, ಕಲಾಪ ಕೊನೆಗೊಳ್ಳುವ ಸಮಯದಲ್ಲಿ ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿದರು.
ಎಜಿ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಅಡ್ವೊಕೇಟ್ ಜನರಲ್ ಪ್ರತಿಮಾ ಹೊನ್ನಾಪುರ ಹಾಗೂ ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ಅವರು ನ್ಯಾಯಪೀಠದ ಮುಂದೆ ಹಾಜರಾಗಿ ಆದೇಶಕ್ಕೆ ತೀವ್ರ ತಕರಾರು ವ್ಯಕ್ತಪಡಿಸಿದರು.
ಪ್ರತಿವಾದಿಗಳ ಆಕ್ಷೇಪಣೆ ಆಲಿಸದೆ ತಡೆ ನೀಡಿರುವುದನ್ನು ವಿರೋಧಿಸಿದ ಎಜಿ ಶಶಿಕಿರಣ ಶೆಟ್ಟಿ, ಮುಟ್ಟಿನ ರಜೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಆದೇಶ ಮತ್ತು ರಾಜ್ಯ ಕಾನೂನು ಆಯೋಗದ ಶಿಫಾರಸಿನ ಅನುಸಾರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಆಕ್ಷೇಪಿಸಿ, ತಡೆಯಾಜ್ಞೆ ಆದೇಶವನ್ನು ತಕ್ಷಣವೇ ತೆರವುಗೊಳಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.
ಎಜಿ ಅವರ ಆಕ್ಷೇಪಣೆ ಹಾಗೂ ಮನವಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು, ಬೆಳಿಗ್ಗೆ ನೀಡಿದ್ದ ತಮ್ಮದೇ ತಡೆಯಾಜ್ಞೆ ಆದೇಶವನ್ನು ಹಿಂದಕ್ಕೆ ಪಡೆದರು.























