ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ VB-G RAM G ಬಿಲ್–2025 ಗ್ರಾಮೀಣ ಭಾರತದ ಹಿತಾಸಕ್ತಿಗೆ ವಿರುದ್ಧವಾಗಿದ್ದು, ಮಹಾತ್ಮ ಗಾಂಧೀಜಿಯವರ ಹೆಸರನ್ನು ಅಳಿಸಿ ಎಂ–ನರೇಗಾ ಯೋಜನೆಯ ಮೂಲ ಆತ್ಮವನ್ನೇ ನಾಶಮಾಡುವ ದುರುದ್ದೇಶ ಹೊಂದಿದೆ ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತೀವ್ರವಾಗಿ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ದೀರ್ಘ ಪೋಸ್ಟ್ ಮಾಡಿರುವ ಅವರು, ಯುಪಿಎ ಸರ್ಕಾರ ಜಾರಿಗೊಳಿಸಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂ–ನರೇಗಾ) ಗ್ರಾಮೀಣ ಬಡವರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿ ನೀಡುವ ಮೂಲಕ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆಯಲ್ಲಿ ಐತಿಹಾಸಿಕ ಪಾತ್ರ ವಹಿಸಿದೆ ಎಂದು ಹೇಳಿದರು. ದೇಶ–ವಿದೇಶದ ಅನೇಕ ತಜ್ಞರು ಪ್ರಶಂಸಿಸಿದ ಈ ಹಕ್ಕು ಆಧಾರಿತ ಯೋಜನೆಯನ್ನು ಕೇಂದ್ರ ಸರ್ಕಾರ ದುರ್ಬಲಗೊಳಿಸುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ICSI, CBSE ಸೇರಿದಂತೆ ಎಲ್ಲ ಪಠ್ಯಕ್ರಮ ಶಾಲೆಗಳಲ್ಲಿ ಕನ್ನಡ ಕಡ್ಡಾಯ
VB-G RAM G ಬಿಲ್ ಮೂಲಕ ಯೋಜನೆಯನ್ನು ಕೇಂದ್ರೀಕೃತಗೊಳಿಸಿ, ವೆಚ್ಚದ ಶೇಕಡಾ 40ರಷ್ಟು ಹೊಣೆಯನ್ನು ರಾಜ್ಯ ಸರ್ಕಾರಗಳ ತಲೆಗೆ ಕಟ್ಟಲಾಗಿದೆ. ಇದು ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಅನುಸರಿಸುತ್ತಿರುವ ಒಕ್ಕೂಟ ವಿರೋಧಿ ಧೋರಣೆಗೆ ಸ್ಪಷ್ಟ ಸಾಕ್ಷಿ ಎಂದು ಪಾಟೀಲ್ ಆರೋಪಿಸಿದರು. ಈ ಬಿಲ್ ಜಾರಿಗೆ ಬಂದರೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಕಡಿಮೆಯಾಗಲಿದ್ದು, ಬಡವರು ನಗರಗಳಿಗೆ ವಲಸೆ ಹೋಗುವಂತಾಗುತ್ತದೆ. ಇದರೊಂದಿಗೆ ಜಾತಿ ಮತ್ತು ಸಾಮಾಜಿಕ ಅಸಮಾನತೆ ಮತ್ತಷ್ಟು ಗಂಭೀರವಾಗಲಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದರು.
ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸಿಗೆ ತಕ್ಕಂತೆ ಹೆಸರಿಟ್ಟಿದ್ದ ಯೋಜನೆಯಿಂದ ಬಾಪೂಜಿಯವರ ಹೆಸರನ್ನು ತೆಗೆದುಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದರು. ವಿದೇಶಗಳಲ್ಲಿ ಗಾಂಧೀಜಿ ಹೆಸರು ಬಳಸಿಕೊಂಡು ಭಾಷಣ ಮಾಡುವ ಪ್ರಧಾನಿ ಮೋದಿ, ದೇಶದೊಳಗೆ ಗಾಂಧೀಜಿಯವರನ್ನು ಅವಮಾನಿಸುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ
ಹಿಂದಿನ ಯುಪಿಎ ಸರ್ಕಾರದ ಜನಪ್ರಿಯ ಯೋಜನೆಗಳನ್ನು ಬಲಪಡಿಸುವ ಬದಲು, ಕೇವಲ ಹೆಸರು ಬದಲಿಸಿ ಕ್ರೆಡಿಟ್ ಪಡೆಯುವುದು ಮೋದಿ ಸರ್ಕಾರದ ಅಭ್ಯಾಸವಾಗಿದೆ ಎಂದು ಆರೋಪಿಸಿದ ಅವರು, ಸ್ವಚ್ಛ ಭಾರತ, ಜನಧನ್, ಅಮೃತ್ ಸೇರಿದಂತೆ 25ಕ್ಕೂ ಹೆಚ್ಚು ಯೋಜನೆಗಳನ್ನು ಮರುಬ್ರ್ಯಾಂಡಿಂಗ್ ಮಾಡಿರುವುದು ‘ಹೆಸರು ಬದಲಾಯಿಸುವ ಸಚಿವಾಲಯ’ ತೆರೆದಂತಾಗಿದೆ ಎಂದು ವ್ಯಂಗ್ಯವಾಡಿದರು.
ಈ ಜನವಿರೋಧಿ, ಬಡವರ ವಿರೋಧಿ ಹಾಗೂ ಒಕ್ಕೂಟ ವಿರೋಧಿ ನಿರ್ಧಾರವನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದು ಸ್ಪಷ್ಟಪಡಿಸಿದ ಎಂ.ಬಿ. ಪಾಟೀಲ್, VB-G RAM G ಬಿಲ್ ವಿರುದ್ಧ ರಾಜ್ಯವ್ಯಾಪಿ ಹೋರಾಟ ಆರಂಭಿಸುವುದಾಗಿ ಘೋಷಿಸಿದರು. ಲಕ್ಷಾಂತರ ಫಲಾನುಭವಿಗಳು ಎಚ್ಚೆತ್ತುಕೊಂಡು, ಬಿಜೆಪಿ ನಾಯಕರನ್ನು ಪ್ರಶ್ನಿಸಿ, ಪಕ್ಷಾತೀತವಾಗಿ ಧ್ವನಿ ಎತ್ತಬೇಕು. ಎಂ–ನರೇಗಾ ಯೋಜನೆಯ ಮೂಲ ಸ್ವರೂಪವನ್ನು ಉಳಿಸಿಕೊಳ್ಳುವುದು ದೇಶದ ಗ್ರಾಮೀಣ ಭಾರತದ ಹಿತಕ್ಕಾಗಿ ಅನಿವಾರ್ಯ ಎಂದು ಅವರು ಕರೆ ನೀಡಿದರು.





















