ದಾವಣಗೆರೆ: ರಾಜ್ಯದಲ್ಲಿ ಭ್ರಷ್ಟಾಚಾರ ವಿರೋಧಿ ಕ್ರಮಗಳು ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ಬೆಳಿಗ್ಗೆ ಲೋಕಾಯುಕ್ತ ಪೊಲೀಸರು ದಾವಣಗೆರೆ ಸೇರಿದಂತೆ ಹಲವೆಡೆ ಅಸ್ತಿಪಾಸ್ತಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ದಾವಣಗೆರೆ ನಗರದಲ್ಲಿ ಕೆಆರ್‌ಐಡಿಎಲ್ (Karnataka Rural Infrastructure Development Limited) ನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಜಗದೀಶ ನಾಯ್ಕ ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಜೂನಿಯರ್ ಎಂಜಿನಿಯರ್ (JE) ಬಿ.ಎಸ್. ಮಧ್ಯಿನಮನೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.
ಮಂಗಳವಾರ ಬೆಳಿಗ್ಗೆ ನಡೆದ ಈ ದಾಳಿಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ದಾವಣಗೆರೆ ಸೇರಿದಂತೆ ಹಾವೇರಿ, ಬೆಂಗಳೂರು, ಹಾಸನ, ಚಿತ್ರದುರ್ಗ, ಬಾಗಲಕೋಟೆ, ಕಲಬುರಗಿ, ಬೀದರ್ ಮತ್ತು ಇತರ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಅಧಿಕಾರಿಗಳ ಅಸ್ತಿಪಾಸ್ತಿ, ಬ್ಯಾಂಕ್ ಖಾತೆ, ಆಸ್ತಿ ದಾಖಲೆಗಳು ಹಾಗೂ ನಗದು ಸೇರಿದಂತೆ ಅನೇಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆ ನಗರದಲ್ಲಿನ ಸರಸ್ವತಿ ಬಡಾವಣೆಯಲ್ಲಿರುವ ಬಿ.ಎಸ್. ಮಧ್ಯಿನಮನೆ ಅವರ ಮನೆ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ಅಲ್ಲಿ ಪತ್ತೆಯಾದ ದಾಖಲೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸುತ್ತಿದ್ದಾರೆ. ಅದೇ ವೇಳೆ, ಚನ್ನಗಿರಿ ವಿಭಾಗದ AEE ಜಗದೀಶ ನಾಯ್ಕ ಅವರ ಕಚೇರಿ ಹಾಗೂ ಶಿವಮೊಗ್ಗ ಜಿಲ್ಲೆಯ ಮೂವರು ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ದಾಳಿ ವೇಳೆ ಲೋಕಾಯುಕ್ತ ಎಸ್ಪಿ ಕೌಲಾಪೂರೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೂಲಗಳ ಪ್ರಕಾರ, ಇಬ್ಬರು ಅಧಿಕಾರಿಗಳು ತಮ್ಮ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಇಬ್ಬರಿಗೂ ಸೇರಿದ ಆಸ್ತಿಯ ಮೌಲ್ಯವನ್ನು ಲೆಕ್ಕಹಾಕುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ವಿವರಗಳು ಹೊರಬರುವ ನಿರೀಕ್ಷೆಯಿದೆ.