Home Advertisement
Home ಸುದ್ದಿ ರಾಜ್ಯ KAS ಫಲಿತಾಂಶ: “ಭ್ರಷ್ಟಾಚಾರವಲ್ಲ, ಇತಿಹಾಸ” – ಜ್ಯೋತಿ ಸ್ಪಷ್ಟನೆ

KAS ಫಲಿತಾಂಶ: “ಭ್ರಷ್ಟಾಚಾರವಲ್ಲ, ಇತಿಹಾಸ” – ಜ್ಯೋತಿ ಸ್ಪಷ್ಟನೆ

0
24

ಫಲಿತಾಂಶಕ್ಕೆ ಅಭ್ಯರ್ಥಿಗಳ ಅನುಮಾನ : ಒಂದೇ ಕೊಠಡಿಯಲ್ಲಿ 10 ಮಂದಿ ಪಾಸ್! – ಪಾರದರ್ಶಕತೆ ಕುರಿತು ಚರ್ಚೆ

ಬೆಂಗಳೂರು: Karnataka Public Service Commission (ಕೆಪಿಎಸ್‌ಸಿ) ಪ್ರಕಟಿಸಿದ ಕೆಎಎಸ್ ಮುಖ್ಯ ಪರೀಕ್ಷಾ ಫಲಿತಾಂಶದ ಕುರಿತಾಗಿ ಅಕ್ರಮದ ಆರೋಪಗಳು ಕೇಳಿಬಂದಿರುವ ನಡುವೆ, ಒಂದೇ ಪರೀಕ್ಷಾ ಕೊಠಡಿಯಲ್ಲಿ 10ಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಸಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿರುವ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ, “ಫಲಿತಾಂಶದಲ್ಲಿ ಯಾವುದೇ ರೀತಿಯ ಭ್ರಷ್ಟಾಚಾರ ನಡೆದಿಲ್ಲ. ಅತ್ಯಂತ ಪಾರದರ್ಶಕವಾಗಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ. ಆಧಾರವಿಲ್ಲದೆ ಆರೋಪ ಮಾಡುವುದು ಸರಿಯಲ್ಲ” ಎಂದು ತಿಳಿಸಿದ್ದಾರೆ.

ಏನಿದೆ ಆರೋಪ?: ಅಭ್ಯರ್ಥಿಗಳ ಪ್ರಕಾರ, ಒಂದೇ ಪರೀಕ್ಷಾ ಕೊಠಡಿಯಲ್ಲಿ 10ರಿಂದ 12 ಮಂದಿ ಪಾಸಾಗಿರುವುದು ಅಸಾಮಾನ್ಯ ಘಟನೆ. ಸಾಮಾನ್ಯವಾಗಿ 24 ಮಂದಿ ಇರುವ ಕೊಠಡಿಯಲ್ಲಿ ಇಷ್ಟು ಮಂದಿ ಆಯ್ಕೆಯಾಗಿರುವುದು ಸಂಶಯ ಹುಟ್ಟಿಸುವಂತಿದೆ ಎಂದು ಅವರು ಆರೋಪಿಸಿದ್ದಾರೆ.

ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆ ಜೋರಾಗಿದ್ದು, ಫಲಿತಾಂಶ ಪ್ರಕ್ರಿಯೆ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳು ಕೇಳಿಬಂದಿವೆ.

“ಇದು ಭ್ರಷ್ಟಾಚಾರವಲ್ಲ, ಇತಿಹಾಸ” – ಕಾರ್ಯದರ್ಶಿ: ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಜ್ಯೋತಿ ಅವರು, “ಸುಮಾರು 5,700ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಂದು ಕೊಠಡಿಯಲ್ಲಿ 24 ಅಭ್ಯರ್ಥಿಗಳು ಇರುವುದು ಸಾಮಾನ್ಯ. ಅದರಲ್ಲಿ 10ರಿಂದ 12 ಮಂದಿ ಪಾಸಾಗುವುದು ಸಂಭವನೀಯ. ಆದರೆ ಕೆಪಿಎಸ್‌ಸಿ ಇತಿಹಾಸದಲ್ಲೇ ಒಂದೇ ಕೊಠಡಿಯಲ್ಲಿ ಇಷ್ಟು ಮಂದಿ ಆಯ್ಕೆಯಾಗಿರುವುದು ಇದೇ ಮೊದಲು. ಇದನ್ನು ಭ್ರಷ್ಟಾಚಾರ ಎಂದು ಕರೆಯುವುದು ಸರಿಯಲ್ಲ; ಇದು ಇತಿಹಾಸ” ಎಂದು ಹೇಳಿದರು.

ಅದೇ ವೇಳೆ, ಈ ಕುರಿತು ತಾವೇ ಖುದ್ದಾಗಿ ಪರಿಶೀಲನೆ ನಡೆಸುತ್ತಿರುವುದಾಗಿ ತಿಳಿಸಿದ ಅವರು, “ಪ್ರತ್ಯೇಕ ತನಿಖಾ ಸಮಿತಿ ರಚಿಸುವ ಅವಶ್ಯಕತೆ ಇಲ್ಲ” ಎಂದರು.

ಅಭ್ಯರ್ಥಿಗಳ ಒತ್ತಾಯ: ಇನ್ನೊಂದೆಡೆ, ಕೆಲ ಅಭ್ಯರ್ಥಿಗಳು ಫಲಿತಾಂಶದ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬಹಿರಂಗಪಡಿಸುವಂತೆ ಹಾಗೂ ಮೌಲ್ಯಮಾಪನ ಕ್ರಮದ ಕುರಿತು ಹೆಚ್ಚಿನ ವಿವರ ನೀಡುವಂತೆ ಒತ್ತಾಯಿಸಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳ ವಿಶ್ವಾಸಾರ್ಹತೆ ಕಾಪಾಡಲು ಕೆಪಿಎಸ್‌ಸಿ ಹೆಚ್ಚಿನ ಪಾರದರ್ಶಕತೆ ತೋರಬೇಕು ಎಂಬುದು ಅವರ ಅಭಿಪ್ರಾಯವಾಗಿದೆ.