ಬೆಂಗಳೂರು: ಈ ವರ್ಷದ ದಸರಾ ಮತ್ತು ದೀಪಾವಳಿ ಹಬ್ಬದ ಅವಧಿಯಲ್ಲಿ ಕರ್ನಾಟಕ ಹಾಲು ಮಹಾಸಂಘ (KMF) ಮತ್ತು ಅದರ ಸದಸ್ಯ ಹಾಲು ಒಕ್ಕೂಟಗಳು ಒಟ್ಟಾಗಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳನ್ನು ಮಾರಾಟ ಮಾಡಿ ₹46 ಕೋಟಿಗಳ ದಾಖಲೆ ವಹಿವಾಟು ನಡೆಸಿವೆ ಎಂದು ಪಶು ಸಂಗೋಪನೆ ಸಚಿವ ಕೆ. ವೆಂಕಟೇಶ್ ತಿಳಿಸಿದ್ದಾರೆ.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2024ರ ಹಬ್ಬದ ಅವಧಿಯಲ್ಲಿ 725 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟದಿಂದ ₹33.48 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಮಾರಾಟದ ಪ್ರಮಾಣ ಮತ್ತು ಆದಾಯ ಎರಡೂ ಹೆಚ್ಚಾಗಿದ್ದು, ಶೇ.38 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಹಿಂದಿನ ದಾಖಲೆ ಮುರಿದ ವಹಿವಾಟು: ಕೆಎಂಎಫ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಸಿಹಿತಿಂಡಿ ಮಾರಾಟ ನಡೆದಿದೆ. ಈ ಬಾರಿ ಹೆಚ್ಚುವರಿ ಬೇಡಿಕೆಯನ್ನು ಪರಿಗಣಿಸಿ, ಸುಮಾರು ಎರಡು ತಿಂಗಳುಗಳ ಮುಂಚಿತವಾಗಿ ನಿಖರ ಯೋಜನೆ ರೂಪಿಸಿ, ಎಲ್ಲಾ ಸದಸ್ಯ ಹಾಲು ಒಕ್ಕೂಟಗಳ ಸಹಕಾರದಿಂದ 1000 ಮೆಟ್ರಿಕ್ ಟನ್ ಮಾರಾಟ ಗುರಿ ನಿಗದಿಪಡಿಸಲಾಗಿತ್ತು. ಅಂತಿಮವಾಗಿ ಗುರಿಯನ್ನು ಮೀರಿಸಿ 1,100 ಮೆಟ್ರಿಕ್ ಟನ್ ಸಿಹಿ ಉತ್ಪನ್ನಗಳ ಮಾರಾಟ ಯಶಸ್ವಿಯಾಯಿತು ಎಂದು ಅವರು ಹೇಳಿದರು.
ನಂದಿನಿ ಬ್ರಾಂಡ್ ಸಿಹಿ ಉತ್ಪನ್ನಗಳ ವೈವಿಧ್ಯ: ನಂದಿನಿ ಬ್ರಾಂಡ್ ಅಡಿ 40ಕ್ಕೂ ಹೆಚ್ಚು ಸಿಹಿ ಉತ್ಪನ್ನ ಮಾದರಿಗಳು ಲಭ್ಯವಿದ್ದು, ಕೆಎಂಎಫ್ ಈ ಉತ್ಪನ್ನಗಳ ಉತ್ಪಾದನೆ ಮತ್ತು ವಿತರಣೆಗಾಗಿ ಮುಂಚಿತ ಸಿದ್ಧತೆ ಕೈಗೊಂಡಿತ್ತು.
ಹಾಲು ಸಂಗ್ರಹ ಮತ್ತು ಮಾರುಕಟ್ಟೆ ವಿಸ್ತರಣೆ: ರಾಜ್ಯದಲ್ಲಿ ಪ್ರತಿ ದಿನ ಸರಾಸರಿ 1 ಕೋಟಿ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದ್ದು, ಅದರಲ್ಲಿ 65 ಲಕ್ಷ ಲೀಟರ್ ಹಾಲು, ಮೊಸರು ಮತ್ತು ಯುಎಚ್‌ಟಿ ಹಾಲು ಉತ್ಪನ್ನಗಳು ರಾಜ್ಯದ ಒಳಗೂ ಹೊರಗೂ ಗ್ರಾಹಕರಿಗೆ ತಲುಪಿಸಲಾಗುತ್ತಿವೆ.
ನಂದಿನಿ ಬ್ರಾಂಡ್ ಅಡಿ ತುಪ್ಪ, ಬೆಣ್ಣೆ, ಪನೀರ್, ಸಿಹಿತಿನಿಸು, ಹಾಲಿನ ಪುಡಿ, ಪಾನೀಯಗಳು ಸೇರಿ 17 ಕ್ಕೂ ಹೆಚ್ಚು ಬಗೆಯ ಹಾಲಿನ ಉತ್ಪನ್ನಗಳು ಆಂಧ್ರ, ತೆಲಂಗಾಣ, ತಮಿಳುನಾಡು, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳ ಜೊತೆಗೆ ದೆಹಲಿ, ಅಸ್ಸಾಂ ಹಾಗೂ ಕೆಲ ವಿದೇಶಿ ಮಾರುಕಟ್ಟೆಗಳಲ್ಲಿ ಯಶಸ್ವಿಯಾಗಿ ಮಾರಾಟವಾಗುತ್ತಿವೆ ಎಂದು ಸಚಿವರು ಹೇಳಿದರು.
ಸಚಿವ ವೆಂಕಟೇಶ್ ಅವರು ನಂದಿನಿ ಉತ್ಪನ್ನಗಳ ಗುಣಮಟ್ಟ, ವಿಶ್ವಾಸಾರ್ಹತೆ ಹಾಗೂ ಗ್ರಾಹಕರ ಬೆಂಬಲವೇ ಈ ಸಾಧನೆಯ ಮೂಲ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.