ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಅಧಿಕಾರ ಹಸ್ತಾಂತರದ ಚರ್ಚೆಗಳು ತೀವ್ರಗೊಂಡಿರುವ ಸಮಯದಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ರನ್ನು ದೆಹಲಿಗೆ ಕರೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ದೆಹಲಿಗೆ ಪ್ರಯಾಣಿಸುವ ಮುನ್ನ ಮಾತನಾಡಿದ ಖರ್ಗೆ ಅವರು, ದೆಹಲಿಗೆ ಹೋದ ನಂತರ ಮಾತುಕತೆ ಪ್ರಾರಂಭವಾಗುತ್ತದೆ. ಪ್ರಮುಖ ಮೂವರು-ನಾಲ್ವರನ್ನು ಕರೆಸಿ ಚರ್ಚಿಸುತ್ತೇನೆ. ಹೇಗೆ ಮುಂದುವರೆಯಬೇಕು ಎಂಬುದರ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ. ಸಿಎಂ, ಡಿಸಿಎಂ ಸೇರಿದಂತೆ ಎಲ್ಲರನ್ನೂ ಕರೆಸಿ ಮಾತನಾಡುತ್ತೇವೆ. ಎಲ್ಲವನ್ನೂ ಪರಿಹರಿಸುತ್ತೇವೆ ಎಂದಿದ್ದಾರೆ.
ಖರ್ಗೆ ನಿವಾಸದಲ್ಲಿ ಬಿರುಸಿನ ರಾಜಕೀಯ: ಮಲ್ಲಿಕಾರ್ಜುನ ಖರ್ಗೆ ದೆಹಲಿಗೆ ತೆರಳುವ ಮುನ್ನವೇ, ಅವರ ನಿವಾಸದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಡಿ. ಸುಧಾಕರ್, ಪ್ರಕಾಶ್ ಹುಕ್ಕೇರಿ ಸೇರಿ ಅನೇಕ ನಾಯಕರು ಭೇಟಿ ನೀಡಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಅಂತಿಮ ಹಂತಕ್ಕೆ ತಲುಪಿದ ರಣತಂತ್ರ: ದೆಹಲಿಯಲ್ಲಿ ಹೈಕಮಾಂಡ್ ಸಭೆ ನಡೆಯಲಿರುವುದರಿಂದ, ಕಾಂಗ್ರೆಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದಂತಾಗಿದೆ. ಸಿಎಂ ಸಿದ್ದರಾಮಯ್ಯ ಆಪ್ತರು, ಹಾಗೆಯೇ ಅಹಿಂದ (Ahinda) ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಸಿಎಂ ಸರ್ಕಾರಿ ನಿವಾಸ ಕಾವೇರಿಯಲ್ಲಿ ನಡೆದ ಅಹಿಂದ ನಾಯಕರ ಸಭೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ: ಈ ಬೆಳವಣಿಗೆ ಸಂಬಂಧವಾಗಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, “ಖರ್ಗೆ ಅವರು ಕರೆಯುತ್ತೆನೆ ಎಂದಿದ್ದಾರೆ… ಕರೆ ಮಾಡಿದರೆ ಹೋಗುತ್ತೇವೆ. ಹೈಕಮಾಂಡ್ ನಿರ್ಧಾರದಂತೆ ನಡೆಯುತ್ತೇವೆ,” ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸಂಪೂರ್ಣ ರಾಜಕೀಯ ತೀವ್ರತೆ ನಡುವೆಯೇ, ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಆಗುತ್ತದೆಯೇ ಅಥವಾ ಸರ್ಕಾರದ ವ್ಯವಸ್ಥೆಯನ್ನು ಮುಂದುವರೆಸುವರೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಶುರುವಾಗಿದೆ.

























