ಬೆಂಗಳೂರು: ಕಬ್ಬು ಬೆಳೆಗಾರರ ಹೋರಾಟ ತೀವ್ರಗೊಳ್ಳುತ್ತಿದ್ದಂತೆ, ರಾಜ್ಯ ಸರ್ಕಾರ ಕೊನೆಗೂ ಎಚ್ಚೆತ್ತುಕೊಂಡಿದೆ. ಗುರುವಾರ ನಡೆದ ತುರ್ತು ಸಚಿವ ಸಂಪುಟ ಸಭೆಯ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರೈತರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ, ಬೆಲೆ ನಿಗದಿಯ ಅಂತಿಮ ತೀರ್ಮಾನವನ್ನು ಶುಕ್ರವಾರ (ನ. 7) ನಡೆಯಲಿರುವ ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆಯ ನಂತರವೇ ಪ್ರಕಟಿಸಲಾಗುವುದು ಎಂದು ತಿಳಿಸುವ ಮೂಲಕ ಕುತೂಹಲವನ್ನು ಜೀವಂತವಾಗಿಟ್ಟಿದ್ದಾರೆ.
ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ: ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ರೈತರ ಪ್ರತಿಭಟನೆ ಉಗ್ರರೂಪ ತಾಳಿದ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ವಿಷಯವೇ ಪ್ರಮುಖವಾಗಿ ಚರ್ಚೆಯಾಯಿತು.
ಸಭೆಯ ನಂತರ ಮಾತನಾಡಿದ ಸಿಎಂ, “ನಮ್ಮದು ರೈತರ ಪರವಾದ ಸರ್ಕಾರ. ರೈತರ ಪ್ರತಿಭಟನೆಯನ್ನು ನಾವು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಎಚ್.ಕೆ. ಪಾಟೀಲ್ ಅವರನ್ನು ಈಗಾಗಲೇ ರೈತರೊಂದಿಗೆ ಮಾತುಕತೆಗೆ ಕಳುಹಿಸಲಾಗಿತ್ತು,” ಎಂದು ಸರ್ಕಾರದ ಕ್ರಮಗಳನ್ನು ವಿವರಿಸಿದರು.
ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ: ಬೆಲೆ ನಿಗದಿಯ ವಿಷಯದಲ್ಲಿ ಕೇಂದ್ರ ಸರ್ಕಾರದ ಪಾತ್ರವನ್ನು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, “ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ನಿಗದಿ ಮಾಡುವುದು ಕೇಂದ್ರ ಸರ್ಕಾರ. 2025-26ನೇ ಸಾಲಿಗೆ 10.25% ಇಳುವರಿಗೆ ಪ್ರತಿ ಟನ್‌ಗೆ ರೂ.3550 ಎಂದು ಅವರೇ ನಿಗದಿ ಮಾಡಿದ್ದಾರೆ,” ಎಂದರು.
ಇದೇ ವೇಳೆ, ಎಥನಾಲ್ ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದರು. “ಕರ್ನಾಟಕದಲ್ಲಿ 270 ಕೋಟಿ ಲೀಟರ್ ಎಥನಾಲ್ ಉತ್ಪಾದಿಸುವ ಸಾಮರ್ಥ್ಯವಿದ್ದರೂ, ಕೇವಲ 47 ಕೋಟಿ ಲೀಟರ್‌ಗೆ ಮಾತ್ರ ಹಂಚಿಕೆ ನೀಡಲಾಗಿದೆ. ಇದು ರಾಜ್ಯದ ರೈತರೊಂದಿಗೆ ಕೇಂದ್ರ ಆಡುತ್ತಿರುವ ಚಲ್ಲಾಟ,” ಎಂದು ಅವರು ವಿವರಿಸಿದರು. ವಿರೋಧ ಪಕ್ಷಗಳು ರೈತರನ್ನು ತಪ್ಪು ದಾರಿಗೆ ಎಳೆಯುತ್ತಿವೆ ಎಂದೂ ಅವರು ದೂರಿದರು.
ನಾಳಿನ ಸಭೆಯೇ ನಿರ್ಣಾಯಕ: ಸರ್ಕಾರದ ಮುಂದಿನ ನಡೆಗಳನ್ನು ಸ್ಪಷ್ಟಪಡಿಸಿದ ಸಿಎಂ, ಶುಕ್ರವಾರವನ್ನು ನಿರ್ಣಾಯಕ ದಿನವನ್ನಾಗಿ ಮಾಡಿದ್ದಾರೆ.
ಬೆಳಗ್ಗೆ 11 ಗಂಟೆಗೆ: ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ.
ಮಧ್ಯಾಹ್ನ 1:30ಕ್ಕೆ: ರೈತ ಮುಖಂಡರೊಂದಿಗೆ ಮಹತ್ವದ ಸಭೆ.
“ಈ ಎರಡೂ ಸಭೆಗಳ ನಂತರವೇ ರಾಜ್ಯ ಸರ್ಕಾರದ ಸಲಹಾ ಬೆಲೆ (SAP) ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲಿಯವರೆಗೂ ರೈತರು ಸಂಯಮದಿಂದ ಇರಬೇಕು,” ಎಂದು ಅವರು ಮನವಿ ಮಾಡಿದರು.
ಅಲ್ಲದೆ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿಗಳ ಭೇಟಿಗೆ ಅವಕಾಶ ಕೋರಿ ಪತ್ರ ಬರೆಯುವುದಾಗಿಯೂ ಅವರು ಭರವಸೆ ನೀಡಿದರು. ಸದ್ಯಕ್ಕೆ, ಜಿಲ್ಲಾಧಿಕಾರಿಗಳ ಮೂಲಕ, ಕಟಾವು ಮತ್ತು ಸಾಗಣೆ ವೆಚ್ಚ ಹೊರತುಪಡಿಸಿ 11.25% ಇಳುವರಿಗೆ ಪ್ರತಿ ಟನ್‌ಗೆ ರೂ.3200 ಹಾಗೂ 10.25% ಇಳುವರಿಗೆ ರೂ.3100 ನೀಡುವ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ಸಿಎಂ ತಿಳಿಸಿದರು.
























