Home ಸುದ್ದಿ ರಾಜ್ಯ ಭಾನುವಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

ಭಾನುವಾರ ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ

0
44

ಬೆಂಗಳೂರು: ರಾಜ್ಯವನ್ನು ಪೋಲಿಯೊ ಮುಕ್ತವಾಗಿರಿಸುವ ಸಂಕಲ್ಪದೊಂದಿಗೆ ಆರೋಗ್ಯ ಇಲಾಖೆಯು ಇದೇ ಭಾನುವಾರ (ಡಿ.21) ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನ ಹಮ್ಮಿಕೊಂಡಿದೆ. ಈ ಅಭಿಯಾನದಲ್ಲಿ ಐದು ವರ್ಷದೊಳಗಿನ 62.40 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ನೀಡುವ ಗುರಿಯನ್ನು ಸರ್ಕಾರ ನಿಗದಿಪಡಿಸಿದೆ.

ರಾಜ್ಯಾದ್ಯಂತ ಈ ಅಭಿಯಾನ ಯಶಸ್ವಿಯಾಗಿ ಜರುಗಿಸಲು 33,258 ಲಸಿಕಾ ಬೂತ್‌ಗಳನ್ನು ಗುರುತಿಸಲಾಗಿದೆ. ನಗರ, ಗ್ರಾಮೀಣ, ಗುಡ್ಡಗಾಡು ಹಾಗೂ ಅತಿ ಹಿಂದುಳಿದ ಪ್ರದೇಶಗಳಲ್ಲಿಯೂ ಮಕ್ಕಳಿಗೆ ಲಸಿಕೆ ತಲುಪುವಂತೆ ಸಮಗ್ರ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ: ಗಂಡು ಮೆಟ್ಟಿದ ನಾಡಿನಲ್ಲಿ ‘ಮಾರ್ಕಂಡೇಯ’ ಅಬ್ಬರಕ್ಕೆ ಕ್ಷಣಗಣನೆ

ರೈಲು–ಬಸ್ ನಿಲ್ದಾಣಗಳಲ್ಲಿ ಸಂಚಾರಿ ತಂಡಗಳು: ಪ್ರಯಾಣಿಕ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು 1,030 ಸಂಚಾರಿ ತಂಡಗಳನ್ನು ನಿಯೋಜಿಸಲಾಗಿದೆ. ಇವು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಮಾರುಕಟ್ಟೆ, ಧಾರ್ಮಿಕ ಕೇಂದ್ರಗಳು ಸೇರಿದಂತೆ ಜನಸಂಚಾರ ಹೆಚ್ಚಿರುವ ಪ್ರದೇಶಗಳಲ್ಲಿ ಲಸಿಕೆ ವಿತರಣೆ ಮಾಡಲಿವೆ. ಇದಲ್ಲದೆ, ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುವ ಮಕ್ಕಳನ್ನು ಗುರುತಿಸಲು 2,096 ಟ್ರಾನ್ಸಿಟ್ ತಂಡಗಳನ್ನು ರಚಿಸಲಾಗಿದೆ.

1.13 ಲಕ್ಷ ಕಾರ್ಯಕರ್ತರ ಸೇವೆ: ಈ ಮಹತ್ವದ ಅಭಿಯಾನಕ್ಕೆ 1.13 ಲಕ್ಷಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಹಾಗೂ ಸಹಾಯಕ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ. ಅಭಿಯಾನದ ಗುಣಮಟ್ಟ ಮತ್ತು ಮೇಲ್ವಿಚಾರಣೆಗಾಗಿ 7,322 ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪೋಲಿಯೊ ಹನಿ ಸಂಪೂರ್ಣ ಸುರಕ್ಷಿತ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ಐದು ವರ್ಷದೊಳಗಿನ ಎಲ್ಲ ಮಕ್ಕಳು ಕಡ್ಡಾಯವಾಗಿ ಪೋಲಿಯೊ ಹನಿ ಪಡೆದುಕೊಳ್ಳಬೇಕು. ಪೋಲಿಯೊ ಹನಿ ಸಂಪೂರ್ಣ ಸುರಕ್ಷಿತವಾಗಿದ್ದು, ಯಾವುದೇ ರೀತಿಯ ವದಂತಿಗಳಿಗೆ ಕಿವಿಗೊಡಬಾರದು. ಪೋಲಿಯೊ ವಿರುದ್ಧದ ಹೋರಾಟದಲ್ಲಿ ರಾಜ್ಯದ ಜನತೆ ಕೈಜೋಡಿಸುವ ಮೂಲಕ ಈ ಸಾಧನೆಯನ್ನು ಮುಂದುವರಿಸಬೇಕು ಎಂದು ಮನವಿ ಮಾಡಿದರು.

ಇದನ್ನೂ ಓದಿ: ಬೆಂಕಿ ಹಚ್ಚಿಕೊಂಡು ಬಿಜೆಪಿ ಕಾರ್ಯಕರ್ತೆ ಆತ್ಮಹತ್ಯೆ

ಲಸಿಕಾ ಕೇಂದ್ರ ಹುಡುಕಲು ಆ್ಯಪ್: ಜನಸಾಮಾನ್ಯರ ಅನುಕೂಲಕ್ಕಾಗಿ ‘Nearby Vaccination Centre Karnataka’ ಎಂಬ ಮೊಬೈಲ್ ಆ್ಯಪ್ ಅನ್ನು ಬಳಸಿಕೊಳ್ಳುವಂತೆ ಸಚಿವರು ಸಲಹೆ ನೀಡಿದರು. ಈ ಆ್ಯಪ್ ಮೂಲಕ ಹತ್ತಿರದ ಲಸಿಕಾ ಕೇಂದ್ರದ ಮಾಹಿತಿ ಸುಲಭವಾಗಿ ಪಡೆದುಕೊಳ್ಳಬಹುದು.

ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅಂಗನವಾಡಿಗಳು ಹಾಗೂ ತಾತ್ಕಾಲಿಕ ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಹನಿ ವಿತರಣೆ ನಡೆಯಲಿದ್ದು, ಮಕ್ಕಳ ಆರೋಗ್ಯ ಸುರಕ್ಷತೆಗೆ ಪೋಷಕರು ಸಹಕರಿಸಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.