ಕರ್ನಾಟಕದಲ್ಲಿ ಈ ಬಾರಿ ರೈತರು ಬಂಗಾರದಂತಹ ಮೆಕ್ಕೆಜೋಳ ಬೆಳೆದಿದ್ದರೂ, ಅವರ ಮೊಗದಲ್ಲಿ ಮಾತ್ರ ಮಂದಹಾಸವಿಲ್ಲ. ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡು ರೈತ ಕಂಗಾಲಾಗಿದ್ದಾನೆ.
ಈ ಸಂಕಷ್ಟದ ಸಮಯದಲ್ಲಿ ರೈತರ ನೆರವಿಗೆ ಬರಬೇಕಿದ್ದ ರಾಜ್ಯ ಸರ್ಕಾರ, ಕೇವಲ ಕೇಂದ್ರದ ಕಡೆಗೆ ಕೈತೋರಿಸಿ ‘ಪೋಸ್ಟ್ ಮ್ಯಾನ್’ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರದ ಪೋಸ್ಟ್‌ಮನ್ ಕೆಲಸವೇಕೆ?: ಸಿಎಂ ಸಿದ್ದರಾಮಯ್ಯ ಅಧಿಕಾರಿಗಳ ಸಭೆ ನಡೆಸಿ, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ತೆರೆಯಲು ಸೂಚಿಸಿದ್ದಾರೆ. ಸರ್ಕಾರ ಪ್ರತಿ ಕ್ವಿಂಟಾಲ್‌ಗೆ 2,400 ರೂ. ನಿಗದಿಪಡಿಸಿದೆ.
ಆದರೆ, ಹಾವೇರಿಯಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, “ಇದು ರೈತರ ಕಣ್ಣೊರೆಸುವ ತಂತ್ರ. ಕೇವಲ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೈಕಟ್ಟಿ ಕೂರಲು ರಾಜ್ಯ ಸರ್ಕಾರವೇನು ಪೋಸ್ಟ್ ಆಫೀಸಾ?” ಎಂದು ಪ್ರಶ್ನಿಸಿದ್ದಾರೆ. ಹಿಂದೆ ಯಡಿಯೂರಪ್ಪ ಸಿಎಂ ಆಗಿದ್ದಾಗ, ಕೇಂದ್ರಕ್ಕೆ ಕಾಯದೇ ರಾಜ್ಯದ ಬಜೆಟ್‌ನಿಂದಲೇ ಹಣ ನೀಡಿ ಬೆಳೆ ಖರೀದಿಸಿದ್ದರು ಎಂಬುದನ್ನು ಬೊಮ್ಮಾಯಿ ನೆನಪಿಸಿದ್ದಾರೆ.
ಬೊಮ್ಮಾಯಿ ಡಿಮ್ಯಾಂಡ್ ಏನು?: ಪ್ರಸ್ತುತ ಸರ್ಕಾರ ನಿಗದಿಪಡಿಸಿರುವ 2,400 ರೂ. ಬೆಂಬಲ ಬೆಲೆ ರೈತರ ಖರ್ಚಿಗೂ ಸಾಲುತ್ತಿಲ್ಲ. ರೈತರ ಮೇಲೆ ನಿಜವಾದ ಕಾಳಜಿ ಇದ್ದರೆ, ಎಂಎಸ್‌ಪಿ ದರದ ಜೊತೆಗೆ ರಾಜ್ಯ ಸರ್ಕಾರ ತನ್ನ ಬೊಕ್ಕಸದಿಂದ 600 ರೂ. ಪ್ರೋತ್ಸಾಹ ಧನ ಸೇರಿಸಿ, ಒಟ್ಟು 3 ಸಾವಿರ ರೂ. ಗಳಿಗೆ ಮೆಕ್ಕೆಜೋಳ ಖರೀದಿಸಬೇಕು ಎಂದು ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಬಂಪರ್ ಬೆಳೆ, ಬಿದ್ದು ಹೋದ ಬೆಲೆ!: ರಾಜ್ಯದಾದ್ಯಂತ ಈ ವರ್ಷ ಉತ್ತಮ ಮಳೆಯಾಗಿದ್ದು, ಸುಮಾರು 17 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಬರೋಬ್ಬರಿ 55 ಲಕ್ಷ ಟನ್ ಮೆಕ್ಕೆಜೋಳ ಉತ್ಪಾದನೆಯಾಗುವ ನಿರೀಕ್ಷೆಯಿದೆ.
ಮಾರುಕಟ್ಟೆಗೆ ಆವಕ ಹೆಚ್ಚಾಗಿದ್ದರಿಂದ ದರವು 1,400 ರೂ.ಗೆ ಕುಸಿದಿದೆ. ಇದೇ ವೇಳೆ, ಅತಿಯಾದ ಮಳೆಯಿಂದಾಗಿ 2 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದ್ದು, ಅದಕ್ಕೆ ಪರಿಹಾರ ನೀಡುವಲ್ಲಿಯೂ ಸರ್ಕಾರ ವಿಫಲವಾಗಿದೆ ಎಂಬುದು ವಿಪಕ್ಷಗಳ ಆರೋಪ.
ರೈತರು ಏನು ಮಾಡಬಹುದು?: ಮೆಕ್ಕೆಜೋಳವು ತರಕಾರಿಯಂತೆ ಬೇಗ ಕೊಳೆಯುವ ಸರಕಲ್ಲ. ಇದನ್ನು ದಾಸ್ತಾನು ಮಾಡಿ ಇಡಬಹುದು. ಸದ್ಯ ಕೋಳಿ ಸಾಕಾಣಿಕೆ ಕೇಂದ್ರಗಳಿಂದ (Poultry Farming) ಮತ್ತು ಎಥೆನಾಲ್ ಉತ್ಪಾದನೆಗೆ ಮೆಕ್ಕೆಜೋಳಕ್ಕೆ ಭಾರೀ ಬೇಡಿಕೆ ಬರಲಿದೆ.
ಆದ್ದರಿಂದ ರೈತರು ಆತುರಪಟ್ಟು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾಲು ಮಾರಾಟ ಮಾಡದೆ, ಸರ್ಕಾರದ ಖರೀದಿ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ತೆರೆಯುವವರೆಗೆ ಅಥವಾ ಮಾರುಕಟ್ಟೆಯಲ್ಲಿ ದರ ಏರಿಕೆಯಾಗುವವರೆಗೆ ಕಾಯುವುದು ಸೂಕ್ತ ಎಂಬುದು ತಜ್ಞರ ಅಭಿಪ್ರಾಯವಾಗಿದೆ.























