ಕಾರಾಗೃಹಗಳಲ್ಲಿ ದಿಢೀರ್ ದಾಳಿ: ಮೊಬೈಲ್, ಚಾಕು, ಗಾಂಜಾ ವಶ

0
5

36 ಗಂಟೆಗಳಲ್ಲಿ ವಿಶೇಷ ಕಾರ್ಯಾಚರಣೆ – ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್

ಬೆಂಗಳೂರು:ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕಳೆದ 36 ಗಂಟೆಗಳ ಅವಧಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಾರಾಗೃಹ ಇಲಾಖೆ ಮಹಾನಿರ್ದೇಶಕ (ಡಿಜಿಪಿ) ಅಲೋಕ್ ಕುಮಾರ್ ಬುಧವಾರ ತಿಳಿಸಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿರುವ ಅವರು, ರಾಜ್ಯದ ಹಲವು ಜೈಲುಗಳಲ್ಲಿ ಏಕಕಾಲದಲ್ಲಿ ದಿಢೀರ್ ತಪಾಸಣೆ ನಡೆಸಲಾಗಿದ್ದು, ಕೈದಿಗಳಿಂದ ಹಾಗೂ ಜೈಲು ಆವರಣದಿಂದ ಅನಧಿಕೃತ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: 1600 PSI ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ: ಡಾ.ಜಿ.ಪರಮೇಶ್ವರ್

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನಡೆಸಿದ ತಪಾಸಣೆಯಲ್ಲಿ 6 ಮೊಬೈಲ್ ಫೋನ್‌ಗಳು ಹಾಗೂ 4 ಚಾಕುಗಳು ವಶಪಡಿಸಿಕೊಳ್ಳಲಾಗಿದೆ. ಮೈಸೂರು ಕೇಂದ್ರ ಕಾರಾಗೃಹದಲ್ಲಿ 9 ಮೊಬೈಲ್ ಫೋನ್‌ಗಳು 11 ಸಿಮ್ ಕಾರ್ಡ್‌ಗಳು ಪತ್ತೆಯಾಗಿವೆ. ಬೆಳಗಾವಿ ಜೈಲಿನಲ್ಲಿ 4 ಮೊಬೈಲ್ ಫೋನ್‌ಗಳು ಮತ್ತು ಜೈಲು ಹೊರಗಿನಿಂದ ಒಳಗೆ ಎಸೆಯಲಾಗಿದ್ದ 366 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಮಂಗಳೂರು ಕಾರಾಗೃಹದಲ್ಲಿ 4 ಮೊಬೈಲ್ ಫೋನ್‌ಗಳು, ವಿಜಯಪುರ ಜೈಲಿನಲ್ಲಿ 1 ಮೊಬೈಲ್ ಫೋನ್ ಪತ್ತೆಯಾಗಿದೆ.

ಜೈಲುಗಳೊಳಗೆ ಮೊಬೈಲ್ ಬಳಕೆ, ನಿಷೇಧಿತ ವಸ್ತುಗಳ ಸಾಗಣೆ ಮತ್ತು ಅಕ್ರಮ ಚಟುವಟಿಕೆಗಳು ಸಮಾಜದ ಭದ್ರತೆಗೆ ಸವಾಲಾಗಿ ಪರಿಣಮಿಸುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಡಿಜಿಪಿ ಅಲೋಕ್ ಕುಮಾರ್ ಜೈಲುಗಳ ಒಳಗಿನ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಲು ಇಂತಹ ದಿಢೀರ್ ದಾಳಿಗಳು ಮುಂದಿನ ದಿನಗಳಲ್ಲೂ ನಿರಂತರವಾಗಿ ಮುಂದುವರಿಯಲಿವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹೈಕಮಾಂಡ್ ಸೂಚಿಸುವವರೆಗೂ ನಾನೇ ಮುಖ್ಯಮಂತ್ರಿ

ವಶಪಡಿಸಿಕೊಂಡ ವಸ್ತುಗಳ ಕುರಿತು ಪ್ರತ್ಯೇಕವಾಗಿ ಪ್ರಕರಣ ದಾಖಲಿಸಲಾಗಿದ್ದು, ಜೈಲು ಸಿಬ್ಬಂದಿಯ ನಿರ್ಲಕ್ಷ್ಯ ಅಥವಾ ಒಳಜಾಲದ ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Previous articleಸ್ಪರ್ಧಾತ್ಮಕ ಪರೀಕ್ಷೆಗಳ ಒತ್ತಡಕ್ಕೆ ನಲುಗಿ ಯುವತಿ ಆತ್ಮಹತ್ಯೆ