Home Advertisement
Home ಸುದ್ದಿ ರಾಜ್ಯ ಉತ್ಸವಗಳಲ್ಲಿ DJ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ

ಉತ್ಸವಗಳಲ್ಲಿ DJ ನಿಷೇಧಿಸಲು ಸಂತೋಷ್ ಲಾಡ್ ಆಗ್ರಹ

0
89

DJ ಬದಲು ಜನಪದ ಕಲೆಗಳಿಗೆ ಅವಕಾಶ: ವಿಧಾನ ಮಂಡಲದಲ್ಲಿ ಚರ್ಚೆ

ಬೆಂಗಳೂರು: ಕರ್ನಾಟಕದಲ್ಲಿ ಸರ್ಕಾರಿ ಉತ್ಸವಗಳಲ್ಲಿ ಡಿಜೆ (DJ) ಸೌಂಡ್ ಸಿಸ್ಟಂಗಳ ಬಳಕೆಯನ್ನು ನಿಷೇಧಿಸುವ ಕುರಿತು ಮಹತ್ವದ ಚರ್ಚೆ ವಿಧಾನ ಮಂಡಲದಲ್ಲಿ ನಡೆದಿದೆ. ಈ ವೇಳೆ ಸಚಿವ ಸಂತೋಷ ಲಾಡ್‌ ಅವರು ಡಿಜೆಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಸರ್ಕಾರ ಆಯೋಜಿಸುವ ಉತ್ಸವಗಳು ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸಬೇಕು. ಆದರೆ ಇತ್ತೀಚಿನ ದಿನಗಳಲ್ಲಿ ಈ ಉತ್ಸವಗಳು ಶಬ್ಧ ಮಾಲಿನ್ಯ ಮತ್ತು ಅಶ್ಲೀಲ ಹಾಡುಗಳ ಬಳಕೆಯಿಂದ ತನ್ನ ಮೂಲ ಅರ್ಥವನ್ನು ಕಳೆದುಕೊಳ್ಳುತ್ತಿರುವುದಾಗಿ ಅವರು ಅಭಿಪ್ರಾಯಪಟ್ಟರು.

DJ ನಿಷೇಧದ ಆಗ್ರಹ: ಸದನದಲ್ಲಿ ಮಾತನಾಡಿದ ಸಚಿವರು, ಅನೇಕ ಜಯಂತಿ ಮತ್ತು ಸರ್ಕಾರಿ ಕಾರ್ಯಕ್ರಮಗಳಲ್ಲಿ ನಿಯಮ ಮೀರಿ ಡಿಜೆ ಸೌಂಡ್ ಸಿಸ್ಟಂಗಳ ಬಳಕೆ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಹೆಚ್ಚಿನ ಡೆಸಿಬೆಲ್‌ ಶಬ್ಧದಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗಬಹುದು. ವಿಶೇಷವಾಗಿ ಮಕ್ಕಳ ಮತ್ತು ಹಿರಿಯ ನಾಗರಿಕರ ಮೇಲೆ ಇದು ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದರು.

ಹೊರರಾಜ್ಯದ ಕಲಾವಿದರ ಬದಲು ಸ್ಥಳೀಯರಿಗೆ ಆದ್ಯತೆ : ಸರ್ಕಾರಿ ಉತ್ಸವಗಳಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹೊರರಾಜ್ಯದ ಕಲಾವಿದರನ್ನು ಕರೆಸುವುದನ್ನು ವಿರೋಧಿಸಿದ ಸಚಿವರು, ಅದರ ಬದಲು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದರು. ಇದರಿಂದ ಸರ್ಕಾರದ ಅನಗತ್ಯ ವೆಚ್ಚ ಕಡಿಮೆಯಾಗುತ್ತದೆ, ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಸಿಗುತ್ತದೆ, ನಾಡಿನ ಸಂಸ್ಕೃತಿ ಯುವ ಪೀಳಿಗೆಗೆ ತಲುಪುತ್ತದೆ ಎಂದರು,

ಕನ್ನಡ ಸಂಸ್ಕೃತಿ ಕಲೆಗಳಿಗೆ ಉತ್ತೇಜನ : ಡಿಜೆಗಳ ಬದಲಾಗಿ ನಾಡಿನ ಜನಪದ ಹಾಗೂ ಪರಂಪರೆಯ ಕಲೆಯನ್ನು ಉತ್ತೇಜಿಸಬೇಕು ಎಂದು ಅವರು ಹೇಳಿದರು. ವಿಶೇಷವಾಗಿ ಡೊಳ್ಳು ಕುಣಿತ, ಕಂಸಾಳೆ, ಜಗ್ಗಹಲಿಗೆ, ಕರಡಿ ಮಜಲು, ಹಗಲು ವೇಷ, ಯಕ್ಷಗಾನ, ಹುಲಿ ಕುಣಿತ
ಇಂತಹ ಕಲೆಗಳಿಗೆ ಅವಕಾಶ ನೀಡುವುದರಿಂದ ಸಂಸ್ಕೃತಿ ಉಳಿಯುವುದಷ್ಟೇ ಅಲ್ಲ, ಕಲಾವಿದರಿಗೆ ಗೌರವ ಸಂಭಾವನೆಯೂ ಸಿಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚಿನ ವರ್ಷಗಳಲ್ಲಿ ರಾಜ್ಯದ ವಿವಿಧ ಉತ್ಸವಗಳಲ್ಲಿ ಡಿಜೆ ಸೌಂಡ್ ಬಳಕೆ ಹೆಚ್ಚಾಗಿದ್ದು, ಶಬ್ಧ ಮಾಲಿನ್ಯ ಹಾಗೂ ಸಾಂಸ್ಕೃತಿಕ ಮೌಲ್ಯಗಳ ಬಗ್ಗೆ ಹಲವಾರು ವಲಯಗಳಿಂದ ಟೀಕೆ ವ್ಯಕ್ತವಾಗುತ್ತಿದೆ.