ನವದೆಹಲಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ನಡೆಯಲಿದೆ ಎನ್ನಲಾಗುತ್ತಿದ್ದ ಕ್ರಾಂತಿ ಸೆಪ್ಟಂಬರ್‌ನಿಂದ ಡಿಸೆಂಬರ್ ಕೊನೆಯವರೆಗೂ ನಡೆಯಲೇ ಇಲ್ಲ. ಇದೀಗ ಕಾಂಗ್ರೆಸ್ ಪಕ್ಷದ ಅಧಿಕೃತ ಮೂಲಗಳ ಪ್ರಕಾರ ಜನವರಿ ಮೊದಲ ವಾರದಲ್ಲೇ ನಾಯಕತ್ವ ಕ್ರಾಂತಿಗೆ ಮುಹೂರ್ತ ನಿಗದಿಯಾದಂತಿದೆ. ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಜನವರಿ 8ರ ಬಳಿಕ ದೆಹಲಿಗೆ ಬನ್ನಿ ಎನ್ನುವ ಅಭಯ ಸಿಕ್ಕಿರುವುದೇ ಇದಕ್ಕೆ ಸ್ಪಷ್ಟ ನಿದರ್ಶನವಾಗಿದ್ದು, ಕ್ರಾಂತಿಯ ಸ್ವರೂಪದ ಬಗ್ಗೆ ತೀವ್ರ ಕುತೂಹಲ ಮೂಡಿದೆ.
ಆದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ಶನಿವಾರ ದೆಹಲಿಯ ಇಂದಿರಾ ಭವನದಲ್ಲಿ ನಡೆದ ಸಿಡಬ್ಲುಸಿ ಸಭೆಯಲ್ಲಿ ಕರ್ನಾಟಕ ನಾಯಕತ್ವ ಕುರಿತ ವಿಚಾರ ಪ್ರಸ್ತಾಪವಾಗಲಿದೆ ಎಂಬ ನಿರೀಕ್ಷೆ ಇತ್ತಾದರೂ ಅದು ಹುಸಿಯಾಗಿದೆ.
ಇದನ್ನೂ ಓದಿ: ಮಹಾತ್ಮಗಾಂಧಿ ನರೇಗಾ ಉಳಿಸಲು ಜ. 5ರಿಂದ ಅತಿದೊಡ್ಡ ಹೋರಾಟ
ಸಾಧ್ಯವಾಗದ ರಾಹುಲ್ ಭೇಟಿ: ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಎಲ್ಲ ಘಟಾನುಘಟಿಗಳು ಭಾಗಿಯಾಗಿದ್ದ ಸಭೆ ಕರ್ನಾಟಕ ನಾಯಕತ್ವದ ಬಗ್ಗೆ ಚರ್ಚಿಸಬಹುದೆಂದು ಭಾರಿ ಕುತೂಹಲ ಕೈ ಪಾಳೆಯದಲ್ಲಿತ್ತು. ಆದರೆ ರಾಷ್ಟ್ರೀಯ ವಿಚಾರಗಳಿಗಷ್ಟೇ ಸೀಮಿತ ವಾಗಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಪ್ರತ್ಯೇಕವಾಗಿ ರಾಹುಲ್‌ಗಾಂಧಿ ಅವರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ನಡೆಸಿದರಾದರೂ ಅದಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ನಾಯಕತ್ವ ಬದಲಾವಣೆ ಸೇರಿದಂತೆ ಯಾವುದೇ ಮಹತ್ವದ ವಿಷಯಗಳ ಕುರಿತು ಅಂತಿಮ ತೀರ್ಮಾನಕ್ಕೆ ಬರುವುದು ಅಸಾಧ್ಯವಾಗಿದೆ. ಸಭೆ ಮುಗಿಸಿ ಸಿದ್ದರಾಮಯ್ಯ ಬೆಂಗಳೂರಿಗೆ ವಾಪಸಾಗಿದ್ದಾರೆ.
ವರಿಷ್ಠರಿಂದಲೇ ಸಿದ್ದುಗೆ ಅಭಯ?: ಸಭೆಯ ಬಳಿಕ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಕೆಲಕಾಲ ಚರ್ಚಿಸಿದ್ದಾರೆ. ಈ ವೇಳೆ ರಾಹುಲ್‌ಗಾಂಧಿ ಅವರು ಜನವರಿ 8ರವರೆಗೂ ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಹಾಗಾಗಿ ಆನಂತರ ತಾವು ದೆಹಲಿಗೆ ಬನ್ನಿ. ಎಲ್ಲಾ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸೋಣ ಎಂದು ಅಭಯ ನೀಡಿದ್ದಾಗಿ ಮೂಲಗಳು ತಿಳಿಸಿವೆ. ಜತೆಗೆ ಡಿ.ಕೆ.ಶಿ ಅವರನ್ನೂ ವರಿಷ್ಠರು ದೆಹಲಿಗೆ ಕರಿಯಬಹುದು ಎಂಬ ಬಗ್ಗೆಯೂ ಮೂಲಗಳಿಂದ ತಿಳಿದುಬಂದಿದೆ.
ಬಜೆಟ್‌ಗೆ ಮುನ್ನ ಸಂಪುಟ ಸರ್ಜರಿ: ಡಿಕೆಶಿ ಅವರಿಗೆ ಸಭೆಗೆ ಆಹ್ವಾನ ಸಿಗದೆ, ಸಿಎಂಗಷ್ಟೇ ಆಹ್ವಾನ ನೀಡಿದ್ದು ವಿವಿಧ ರೀತಿ ಚರ್ಚೆಗಳಿಗೆ ಕಾರಣವಾಗಿತ್ತು. ಸಂಪುಟ ಪುನಾರಚನೆ ಲೆಕ್ಕಚಾರದಲ್ಲಿದ್ದ ಸಿಎಂ ಸಿದ್ದರಾಮಯ್ಯ, ರಾಹುಲ್ ಗಾಂಧಿ ಅವರು ವಾಪಸ್ ಆದ ಬಳಿಕ ಮತ್ತೆ ದೆಹಲಿಗೆ ತೆರಳಿ ಹೈಕಮಾಂಡ್ ವರಿಷ್ಠರನ್ನು ಭೇಟಿಯಾಗಿ ಬಜೆಟ್‌ಗೂ ಮುನ್ನ ಸಂಪುಟ ಪುನಾರಚನೆ ಮಾಡುವ ಇಂಗಿತವನ್ನು ಆಪ್ತರ ಮುಂದೆ ವ್ಯಕ್ತಪಡಿಸಿದ್ದಾರೆ. ಮತ್ತೊಂದು ಕಡೆ ಡಿಸಿಎಂ ಡಿಕೆಶಿ ಸಿಎಂಸ್ಥಾನದ ನಿರೀಕ್ಷೆಯಲ್ಲಿದ್ದು, ಅವರಿಂದಲೂ ದೆಹಲಿ ಯಾತ್ರೆ ಖಚಿತವಾಗಿದೆ. ಹಾಗಾಗಿ ಹೈಕಮಾಂಡ್ ನಿರ್ಧಾರ ಏನಿರಲಿದೆ ಎನ್ನುವುದು ಮಾತ್ರ ಸಧ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.






















