ಕರ್ನಾಟಕ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ತಮ್ಮ ಜಪಾನ್ ಪ್ರವಾಸದ ವೇಳೆ ವಿಶ್ವಪ್ರಸಿದ್ಧ ಮೋಟಾರ್ ಕಂಪೆನಿ ಹೋಂಡಾ ನಿರ್ದೇಶಕ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ನೋರಿಯಾ ಕೈಹಾರಾ ಅವರನ್ನು ಭೇಟಿಯಾಗಿ, ಕರ್ನಾಟಕದಲ್ಲಿ ಹೋಂಡಾದ ಉತ್ಪಾದನಾ ವ್ಯಾಪ್ತಿಯನ್ನು ವಿಸ್ತರಿಸುವ ಕುರಿತು ಮಹತ್ವದ ಚರ್ಚೆ ನಡೆಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿವರು ಹೋಂಡಾದ ಈಗಿನ ಉತ್ಪಾದನಾ ಸಾಮರ್ಥ್ಯ ಮತ್ತು ಮುಂದಿನ ಹೂಡಿಕೆ ಯೋಜನೆಗಳ ಕುರಿತು ರಾಜ್ಯ ಸರ್ಕಾರದಿಂದ ಸಂಪೂರ್ಣ ಸಹಕಾರ ದೊರೆಯುತ್ತದೆ ಎಂದಿದ್ದಾರೆ.
ಕರ್ನಾಟಕದ ನರಸಾಪುರ – ಭಾರತದಲ್ಲೇ ಅತಿದೊಡ್ಡ ಹೋಂಡಾ ತಾಣ: ಕರ್ನಾಟಕದ ನರಸಾಪುರದಲ್ಲಿರುವ ಹೋಂಡಾದ ಟೂ-ವೀಲರ್ ಕಾರ್ಖಾನೆ ಈಗಾಗಲೇ ಭಾರತದಲ್ಲಿನ ಅತಿದೊಡ್ಡ ತಾಣವಾಗಿದ್ದು, ಇಲ್ಲಿ ವರ್ಷಕ್ಕೆ ಸುಮಾರು 2.4 ದಶಲಕ್ಷ ವಾಹನಗಳನ್ನು ಉತ್ಪಾದಿಸಲಾಗುತ್ತಿದೆ. ಈ ಸಾಧನೆ ಹೋಂಡಾದ ಭಾರತ ಮಾರುಕಟ್ಟೆಯ ಮೇಲೆ ಇರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಹೊಸ ಹೂಡಿಕೆ – ಎಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನೆ: ಜಾಗತಿಕ ಹೂಡಿಕೆದಾರರ ಸಮಾವೇಶದ ವೇಳೆ ಮಾಡಿಕೊಂಡ ಒಪ್ಪಂದದ (MoU) ಅನ್ವಯ, ಹೋಂಡಾ ಸಂಸ್ಥೆ ₹600 ಕೋಟಿ ಹೂಡಿಕೆ ಮೂಲಕ ಭಾರತದ ಮೊದಲ ಎಲೆಕ್ಟ್ರಿಕ್ ಟೂ-ವೀಲರ್ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲು ನಿರ್ಧರಿಸಿದೆ. ಇದು ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಮಹತ್ತರ ಮೈಲುಗಲ್ಲಾಗಲಿದೆ.
EV ಕ್ಷೇತ್ರದಲ್ಲಿ ಕರ್ನಾಟಕದ ದೃಷ್ಟಿಕೋಣ: ಸಚಿವ ಪಾಟೀಲ್ ಅವರು, ದ್ವಿಚಕ್ರ ವಾಹನಗಳ ಕ್ಷೇತ್ರದಾಚೆಗೆ ಹೆಚ್ಚಿನ ಹೂಡಿಕೆಗಳನ್ನು ಪರಿಶೀಲಿಸಲು ಹೋಂಡಾ ಸಂಸ್ಥೆಯನ್ನು ಪ್ರೋತ್ಸಾಹಿಸಿದ್ದು, ಹೋಂಡಾದ ಕಾರ್ಯಾಚರಣೆ ಮತ್ತು ಭವಿಷ್ಯದ ವಿಸ್ತರಣೆಗಳನ್ನು ಸುಗಮಗೊಳಿಸಲು ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತದೆ ಎಂದು ಹೇಳಿದರು.
ಕರ್ನಾಟಕವನ್ನು ಎಲೆಕ್ಟ್ರಿಕ್ ವಾಹನಗಳು (EV) ಮತ್ತು ಅತ್ಯಾಧುನಿಕ ಸಂಚಾರ ತಂತ್ರಜ್ಞಾನದ ಜಾಗತಿಕ ಕೇಂದ್ರವಾಗಿ ರೂಪಿಸುತ್ತಿದ್ದೇವೆ. ಹೋಂಡಾದ ಹೊಸ ಹೂಡಿಕೆ ಈ ದೃಷ್ಟಿಕೋಣವನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ತಿಳಿಸಿದ್ದಾರೆ.