ಗುಡ್‌ನ್ಯೂಸ್‌: ಶೀಘ್ರದಲ್ಲಿಯೇ 24,300 ಹುದ್ದೆಗಳ ಭರ್ತಿ

0
1

ಬೆಳಗಾವಿ: ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಸಲುವಾಗಿ ನೇಮಕಾತಿ ಪ್ರಕ್ರಿಯೆ ವಿಳಂಬಗೊಂಡಿದ್ದು, 2,84,881 ವಿವಿಧ ಸರ್ಕಾರಿ ಹುದ್ದೆಗಳು ಖಾಲಿ ಉಳಿದಿದ್ದು, ಈ ಪೈಕಿ 24,300 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮತಿ ಕೊಟ್ಟಿದೆ. ಶೀಘ್ರದಲ್ಲಿ ಹಂತ ಹಂತವಾಗಿ ಅವುಗಳನ್ನು ಭರ್ತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಪರಿಷತ್‌ನಲ್ಲಿ ಗುರುವಾರ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಹಣಮಂತ ನಿರಾಣಿ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿ, 2023 ರಿಂದ 2024-25ರವರೆಗಿನ ಸಾಲಿನಲ್ಲಿ 562 ಎ ಶ್ರೇಣಿ ಹುದ್ದೆಗಳು, 619 ಬಿ-ಶ್ರೇಣಿ ಹುದ್ದೆಗಳು ಮತ್ತು 23,119 ಸಿ ಶ್ರೇಣಿಗಳ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಮಂಜೂರಾತಿ ನೀಡಿದೆ ಎಂದರು.

ಒಟ್ಟು 2,84, 881 ಖಾಲಿ ಹುದ್ದೆಗಳಲ್ಲಿ 96,844 ಹುದ್ದೆಗಳನ್ನು ಗುತ್ತಿಗೆ, ಹೊರಗುತ್ತಿಗೆ ಆಧಾರದ ಮೇಲೆ ಭರ್ತಿಯಾಗಿವೆ. ಇನ್ನು 1,88,037 ಹುದ್ದೆಗಳಲ್ಲಿ 24,330 ಹುದ್ದೆಗಳ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟರೆ, ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ವೃಂದದಲ್ಲಿ 32,132 ಹುದ್ದೆಗಳು ಸೇರಿ ಒಟ್ಟು 56 ಸಾವಿರ ಹುದ್ದೆಗಳ ಭರ್ತಿಗೆ ಕ್ರಮವಹಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನೇಮಕಾತಿಯಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ: ಸಾಧನೆಗೈದ ರಾಜ್ಯದ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಅರಣ್ಯ, ಪೊಲೀಸ್ ಇಲಾಖೆಯಲ್ಲಿ ಶೇ. 3 ಹಾಗೂ ಇತರೆ ಇಲಾಖೆಗಳಲ್ಲಿ ಶೇ. 2ರಷ್ಟು ಹುದ್ದೆಗಳ ನೇಮಕಾತಿಯಲ್ಲಿ ಮೀಸಲಾತಿ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಐವನ್ ಡಿಸೋಜಾ ಕೇಳಿದ ಪ್ರಶ್ನೆಗೆ ಮುಖ್ಯಮಂತ್ರಿಗಳು ಲಿಖಿತವಾಗಿ ಉತ್ತರಿಸಿದರು. ಕಳೆದ 2022ರಿಂದ 2025ವರೆಗೆ ಒಲಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷಿಯನ್ ಗೇಮ್ಸ್, ಪ್ಯಾರಾ ಏಷಿಯನ್ ಗೇಮ್ಸ್, ಮತ್ತು ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪದಕ ಪಡೆದ 13 ಕ್ರೀಡಾಪಟುಗಳಿಗೆ ವಿಶೇಷ ನೇಮಕಾತಿ ನಿಯಮದಡಿ ಅವಕಾಶ ಪತ್ರ ನೀಡಲಾಗಿದೆ. ಈಗಾಗಲೇ 10 ಕ್ರೀಡಾಪಟುಗಳನ್ನು ಗ್ರೂಪ್-ಬಿ ವೃಂದದ ಹುದ್ದೆಗಳಿಗೆ ಭರ್ತಿ ಮಾಡಲಾಗಿದ್ದು, ಇನ್ನು ಮೂವರ ನೇಮಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಇದುವರೆಗೆ 70 ಪೇದೆ ಮತ್ತು 14 ಜನ ಕ್ರೀಡಾಪಟುಗಳನ್ನು ಪಿಎಸ್‌ಐ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ಮುಂದಿನ ದಿನಗಳಲ್ಲಿ ಕಬಡ್ಡಿ ಸಾಧಕರನ್ನು ಪರಿಗಣಿಸುವ ಬಗ್ಗೆ ಪರಿಶೀಲಿಸುವೆ ಎಂದರು.

Previous article`ಸೆಲೆಬ್ರಿಟಿ’ಗಳಿಗೆ ಡೆವಿಲ್ ಡಬಲ್ ಮನರಂಜನೆ‌