Home Advertisement
Home ಸುದ್ದಿ ರಾಜ್ಯ ಹಿರಿಯ ಸಾಹಿತಿ, ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ರಾಮಸ್ವಾಮಿ ನಿಧನ

ಹಿರಿಯ ಸಾಹಿತಿ, ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ರಾಮಸ್ವಾಮಿ ನಿಧನ

0
63

ಬೆಂಗಳೂರು: ಹಿರಿಯ ವಿದ್ವಾಂಸ, ಲೇಖಕ ಹಾಗೂ ಪತ್ರಕರ್ತ ಡಾ. ಎಸ್.ಆರ್. ರಾಮಸ್ವಾಮಿ (88) ಅವರು ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ರಂಗರಾವ್ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಅವರ ನಿಧನವು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ಅಪಾರ ನಷ್ಟವಾಗಿದೆ.

ಸೊಂಡೆಕೊಪ್ಪ ರಾಮಚಂದ್ರಶಾಸ್ತ್ರಿ ರಾಮಸ್ವಾಮಿ ಎಂಬ ಪೂರ್ಣ ಹೆಸರಿನ ಅವರು 1937ರ ಅಕ್ಟೋಬರ್ 29ರಂದು ಜನಿಸಿದ್ದು, ಕನ್ನಡ ಸಾಹಿತ್ಯ, ಪತ್ರಿಕೋದ್ಯಮ, ಪರಿಸರ ಚಳವಳಿ ಮತ್ತು ಸಾಮಾಜಿಕ ಸೇವೆಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ.

ಸಾಹಿತ್ಯ, ಪತ್ರಿಕೋದ್ಯಮದಲ್ಲಿ ವಿಶಿಷ್ಟ ಸೇವೆ: ಡಾ. ರಾಮಸ್ವಾಮಿ ಅವರು ‘ಸುಧಾ’ ವಾರಪತ್ರಿಕೆಯಲ್ಲಿ ಮುಖ್ಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದು, ನಂತರ ರಾಷ್ಟೋತ್ಥಾನ ಪರಿಷತ್ತಿನ ಅಧ್ಯಕ್ಷರಾಗಿದ್ದರು. ಜೊತೆಗೆ ‘ಉತ್ಥಾನ’ ಮಾಸಪತ್ರಿಕೆಯ ಪ್ರಧಾನ ಸಂಪಾದಕರಾಗಿ ಅನೇಕ ಹೊಸ ಪ್ರತಿಭೆಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದರು.

ಅವರು 50ಕ್ಕೂ ಹೆಚ್ಚು ಕೃತಿಗಳು ಮತ್ತು 2000ಕ್ಕೂ ಹೆಚ್ಚು ಲೇಖನಗಳನ್ನು ರಚಿಸಿದ್ದು, ಮಹಾಭಾರತದ ಬೆಳವಣಿಗೆ, ಕಾರ್ಗಿಲ್ ಕಂಪನ, ಡಿ.ವಿ. ಗುಂಡಪ್ಪ ಅವರ ಜೀವನ ಮತ್ತು ಚಿಂತನೆ, ಜಯಪ್ರಕಾಶ ನಾರಾಯಣ ಕುರಿತ ಕೃತಿಗಳು ಹೀಗೆ ವಿವಿಧ ವಿಷಯಗಳಲ್ಲಿ ಆಳವಾದ ಬರಹಗಳನ್ನು ನೀಡಿದ್ದಾರೆ.

ಸಾಂಸ್ಕೃತಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ: ರಾಮಸ್ವಾಮಿ ಅವರು ಕೇವಲ ಸಾಹಿತಿಯಷ್ಟೇ ಅಲ್ಲ, ಪರಿಸರವಾದಿ ಹಾಗೂ ಸಮಾಜಸೇವಕರಾಗಿಯೂ ಗುರುತಿಸಿಕೊಂಡಿದ್ದರು. ಗ್ರಾಮೀಣಾಭಿವೃದ್ಧಿ, ಪರಿಸರ ಸಂರಕ್ಷಣೆ, ಸ್ವದೇಶಿ ಚಳವಳಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ಅನೇಕ ಜನಪರ ಹೋರಾಟಗಳಲ್ಲಿ ಭಾಗವಹಿಸಿದ್ದು, ಅಗತ್ಯವಿದ್ದಲ್ಲಿ ನ್ಯಾಯಾಲಯಗಳಲ್ಲಿಯೂ ಹೋರಾಟ ನಡೆಸಿ ಸಮಾಜದ ಪರ ನಿಂತಿದ್ದರು.

ಅನೇಕ ಪ್ರಶಸ್ತಿ, ಗೌರವಗಳು: ಡಾ. ಎಸ್.ಆರ್. ರಾಮಸ್ವಾಮಿ ಅವರಿಗೆ ತಮ್ಮ ಬಹುಮುಖ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1992), ಆರ್ಯಭಟ ಪ್ರಶಸ್ತಿ (2006), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (2008), ಗೌರವ ಡಾಕ್ಟರೇಟ್ (2011), ‘ನಾಡೋಜ’ ಪದವಿ (2015)

ಅಂತಿಮ ದರ್ಶನ ಮತ್ತು ಅಂತ್ಯಕ್ರಿಯೆ: ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಬೆಳಿಗ್ಗೆ 10:30ರಿಂದ ಮಧ್ಯಾಹ್ನ 12ರವರೆಗೆ ಚಾಮರಾಜಪೇಟೆಯ ಕೇಶವಶಿಲ್ಪದಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಳಿಕ ಮಧ್ಯಾಹ್ನ 12ರ ನಂತರ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.