ನವದೆಹಲಿ: ಮುಖ್ಯಮಂತ್ರಿ ಬದಲಾವಣೆ ಕದನದ ನಡುವೆಯೇ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾನುವಾರ ದೆಹಲಿಯಲ್ಲಿ ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಸೇರಿದಂತೆ ಹಲವು ಹಿರಿಯ ಮುಖಂಡರನ್ನು ಖಾಸಗಿಯಾಗಿ ಭೇಟಿ ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ.
ದೆಹಲಿಯಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿ.ಕೆ. ಶಿವಕುಮಾರ್, “ನಾನು ದೆಹಲಿಗೆ ಬಂದಾಗ ಎಲ್ಲರನ್ನೂ ಭೇಟಿ ಮಾಡಬೇಕು. ಸುರ್ಜೆವಾಲಾ ಅವರನ್ನು, ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಬೇಕು. ಇಂದಿರಾ ಭವನದಲ್ಲಿ ನಡೆದ ಭೋಜನ ಕೂಟದಲ್ಲಿ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನೂ ಭೇಟಿ ಮಾಡಿರುವೆ” ಎಂದು ತಿಳಿಸಿದ್ದಾರೆ.
ಅಧಿವೇಶನ ಮುಗಿದ ಬಳಿಕ ರಾಹುಲ್ ಗಾಂಧಿ ಅವರನ್ನು ಮತ್ತೆ ಭೇಟಿ ಮಾಡುತ್ತೀರಾ ಎಂಬ ಪ್ರಶ್ನೆಗೆ, “ಪಕ್ಷದಲ್ಲಿ ನಮ್ಮ ಅವರ ಮಧ್ಯೆ ಮಾತುಕತೆ ಇದ್ದೇ ಇರುತ್ತದೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ” ಎಂದರು.





















