ಬೆಳಗಾವಿ: ಗೃಹಲಕ್ಷ್ಮೀ ಕಂತುಗಳ ಪಾವತಿ ವಿಷಯದಲ್ಲಿ ಸರ್ಕಾರ ಸದನಕ್ಕೆ ತಪ್ಪು ಮಾಹಿತಿ ನೀಡಿದೆ ಎನ್ನುವ ವಿಷಯ ಶುಕ್ರವಾರ ವಿಧಾನಸಭೆಯಲ್ಲಿ ಸರ್ಕಾರ ಮತ್ತು ವಿಪಕ್ಷದ ನಡುವೆ ಭಾರೀ ಜಿಜ್ಞಾಸೆಗೆ ಕಾರಣವಾಯಿತು.
ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಪ್ರವೇಶಿಸಿ ಸಮಜಾಯಿಷಿ ನೀಡಿದಾಗ್ಯೂ ಪ್ರತಿಪಕ್ಷದ ನಾಯಕ ಆರ್. ಅಶೋಕ ಮತ್ತು ವಿ. ಸುನೀಲ್‌ಕುಮಾರ್ ಹರಿತವಾಗಿ ಮುಗಿಬಿದ್ದ ಪರಿಣಾಮ, ಸ್ಪೀಕರ್ ಯು.ಟಿ. ಖಾದರ್ ಮಧ್ಯಪ್ರವೇಶಿಸಿ ಸಮಾಧಾನ ಮಾಡಬೇಕಾಯಿತು.
ಹುಬ್ಬಳ್ಳಿ ಸೆಂಟ್ರಲ್ ಶಾಸಕ ಮಹೇಶ ಟೆಂಗಿನಕಾಯಿ `ಗೃಹಲಕ್ಷ್ಮೀಯ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ಕಂತುಗಳು ಏಕೆ ಬಂದಿಲ್ಲ? ಸರ್ಕಾರದ ಬಳಿ ಹಣ ಇಲ್ಲವೇ’ ಎಂದು ಪ್ರಶ್ನಿಸಿದ್ದರು.
ಉತ್ತರಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, `ಯಾವ ಕಂತೂ ಉಳಿದಿಲ್ಲ; ಆಗಸ್ಟ್‌ವರೆಗಿನ ಎಲ್ಲ ಕಂತುಗಳು ಫಲಾನುಭವಿಗಳಿಗೆ ತಲುಪಿವೆ’ ಎಂದಿದ್ದರು. ಟೆಂಗಿನಕಾಯಿ ತಮ್ಮ ಆಪಾದನೆಗೆ ಬದ್ಧರಾಗಿ ಉಳಿದಿದ್ದರು.
ನಂತರದ ಬೆಳವಣಿಗೆಯಲ್ಲಿ ಶಾಸಕ ಮಹೇಶ ಟೆಂಗಿನಕಾಯಿ ಅಧಿಕೃತ ಮಾಹಿತಿಯನ್ನು ಇಲಾಖೆಯಿಂದ ಪಡೆದುಕೊಂಡು, ಶುಕ್ರವಾರ ಬೆಳಿಗ್ಗೆ ತಮ್ಮ ನಾಯಕ ಅಶೋಕ್‌ಗೆ ಸಲ್ಲಿಸಿದ್ದರು.
ಇದನ್ನೂ ಓದಿ: ಗುಡ್‌ನ್ಯೂಸ್: ಶೀಘ್ರದಲ್ಲಿಯೇ 24,300 ಹುದ್ದೆಗಳ ಭರ್ತಿ
ಪ್ರಶ್ನೋತ್ತರ ಕಲಾಪ ಪೂರ್ಣಗೊಳ್ಳುತ್ತಿದ್ದಂತೇ ಅಶೋಕ್ ವಿಷಯವನ್ನು ಕೈಗೆತ್ತಿಕೊಂಡಾಗ ಮುಖ್ಯಮಂತ್ರಿಗಳು ಸದನದಲ್ಲಿದ್ದರು. `ಸದನವನ್ನು ಈ ರೀತಿ ದಾರಿ ತಪ್ಪಿಸೋದು ಸರಿಯೇ? ನಾವು ಏನಾದರೂ ತಪ್ಪು ಮಾತನಾಡಿದರೆ ಸೂಜಿ ಮೊನೆಯಿಂದ ಚುಚ್ಚಿದಂತೆ ಚುಚ್ಚಿ ಚುಚ್ಚಿ ಹೇಳುತ್ತಾರೆ ಕಾನೂನು ಸಚಿವರು? ಸಚಿವರಾದವರು ಸದನದ ಮೂಲಕ ಶಾಸಕರಿಗೆ ತಪ್ಪು ಮಾಹಿತಿ ಕೊಡಬಹುದೇ’ ಎಂದು ಕೇಳಿದರು.
`ಗೃಹಲಕ್ಷ್ಮೀಯ ಎರಡು ಕಂತುಗಳು ಬಂದಿಲ್ಲ ಎಂದಾದರೆ, ಇನ್ನೊಮ್ಮೆ ಪರಿಶೀಲಿಸಿ ಆ ಕಂತುಗಳನ್ನೂ ಹಾಕುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಧಾನ ಮಾಡಿದ್ದು ಪ್ರಯೋಜನವಾಗಲಿಲ್ಲ.
ಕಂತುಗಳನ್ನು ಹಾಕುವುದು ಅಥವಾ ಇದುವರೆಗೆ ಕೊಟ್ಟಿರುವುದರ ಬಗ್ಗೆ ನಮ್ಮ ಪ್ರಶ್ನೆ ಅಲ್ಲ. ರಾಜ್ಯಕ್ಕೆ ತಪ್ಪು ಮಾಹಿತಿ ನೀಡಿರುವ ಸಚಿವರು ಅಥವಾ ಅವರಿಗೆ ಉತ್ತರ ಸಿದ್ಧ ಮಾಡಿಕೊಟ್ಟಿರುವ ಅಧಿಕಾರಿಗಳ ಮೇಲೆ ಏನು ಕ್ರಮ ಹೇಳಿ? ಸಚಿವರ ವಿರುದ್ಧ ಹಕ್ಕುಚ್ಯುತಿ ಮಾಡುವಿರಾ ಎಂದು ಸುನೀಲ್ ಕುಮಾರ್ ಸ್ಪೀಕರ್ ಅವರನ್ನು ಪ್ರಶ್ನಿಸಿದರು.
ಇದು ಹಕ್ಕುಚ್ಯುತಿ ಮಾಡುವಂತಹ ವಿಷಯವಲ್ಲ. ಅಂಥದ್ದೇನಾಗಿದೆ ಎಂಬುದು ಸಿಎಂ ಅವರ ಪ್ರತಿವಾದವಾಗಿತ್ತು. ಕೊನೆಗೆ ಮಧ್ಯಪ್ರವೇಶಿಸಿದ ಸ್ಪೀಕರ್ ಖಾದರ್ ರೂಲಿಂಗ್ ನೀಡಬೇಕಾಯಿತು. `ತಪ್ಪು ಮಾಹಿತಿ ಏಕೆ ಹೊರಬಂತು? ಅಧಿಕಾರಿಗಳು ತಪ್ಪು ಉತ್ತರ ಬರೆದುಕೊಟ್ಟರೇ ಎಂಬುದನ್ನು ಸೋಮವಾರ ವಿಚಾರಣೆ ನಡೆಸಿ, ಸದನಕ್ಕೆ ಸಚಿವರಿಂದ ಸ್ಪಷ್ಟನೆ ಕೊಡಿಸಲಾಗುವುದು’ ಎಂದು ಸ್ಪೀಕರ್ ರೂಲಿಂಗ್ ನಂತರ ವಿಷಯ ತಣ್ಣಗಾಯಿತು.





















