ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಅವೈಜ್ಞಾನಿಕ ಗ್ಯಾರಂಟಿ ಯೋಜನೆಗಳಿಂದ ವಿದ್ಯುತ್ ಸರಬರಾಜು ಕಂಪನಿಗಳು ದಿವಾಳಿತನದತ್ತ ಸಾಗುತ್ತಿವೆ. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳ ಹೊಟ್ಟೆ ಮೇಲೂ ತಣ್ಣೀರು ಸುರಿಯುವಂತೆ, ಬಿಸಿಯೂಟ ಯೋಜನೆಗೂ ಕುತ್ತು ತರುವ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ “ಇದು ಕಾಂಗ್ರೆಸ್ ಸರ್ಕಾರದ ದುರಾಡಳಿತದ ಪರಮಾವಧಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಹಾಗೂ ಕಂಪನಿಗಳನ್ನು ಸಂಕಷ್ಟಕ್ಕೆ ತಳ್ಳಲಾಗುತ್ತಿದೆ. ಸಾವಿರಾರು ಕೋಟಿ ರೂ. ಬಾಕಿ ಪಾವತಿಸದೆ, ಜನರ ಮೇಲೆಯೇ ಹೊರೆ ಹಾಕಿ ದೈನಂದಿನ ಜೀವನವನ್ನು ದುಸ್ತರಗೊಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಪ್ರಲ್ಹಾದ ಜೋಶಿ ಅವರು ಮುಖ್ಯಮಂತ್ರಿಗೆ ನೇರ ಪ್ರಶ್ನೆ ಎತ್ತಿದ್ದಾರೆ – “ಸಿದ್ದರಾಮಯ್ಯನವರೇ, ನೀವು ಬಡವರ ಹಸಿವು ನೀಗಿಸಲು ‘ಹತ್ತು ಕೆಜಿ ಅಕ್ಕಿ ಬೇಕಾ ಬೇಡ್ವಾ?’ ಎಂದು ಕೇಳುತ್ತಿದ್ದೀರಲ್ಲ? ಈಗ ಎಲ್ಲಿದೆ ನಿಮ್ಮ ಬದ್ಧತೆ? ನಿಮ್ಮ ಆಡಳಿತದಲ್ಲಿ ಮಕ್ಕಳ ಬಿಸಿಯೂಟಕ್ಕೂ ಹಣ ಸಿಗದ ಸ್ಥಿತಿ ಬಂದಿದೆ!” ಎಂದು ಕಟುವಾಗಿ ಟೀಕಿಸಿದ್ದಾರೆ.
ಅವರು ಮುಂದುವರಿಸಿ, ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕ ಸ್ಥಿತಿ ಹಾಳಾಗಿದ್ದು, ಸರ್ಕಾರ ಜನರ ಕಷ್ಟಕ್ಕೆ ಕಣ್ಣೆರೆಸಿದೆ ಎಂದಿದ್ದಾರೆ. ರಾಜ್ಯ ಖಜಾನೆ ಖಾಲಿಯಾಗಿದ್ದು, ಎಸ್ಕಾಂ ಕಂಪನಿಗಳಿಗೆ ಪಾವತಿಸಬೇಕಾದ ಸಾವಿರಾರು ಕೋಟಿ ರೂ. ಬಾಕಿಯಾಗಿದೆ. ಇದರ ಪರಿಣಾಮವಾಗಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಭೀತಿ ವ್ಯಕ್ತವಾಗಿದೆ ಎಂದಿದ್ದಾರೆ.
























