ಸಂ.ಕ.ಸಮಾಚಾರ ಬೆಂಗಳೂರು: ರಾಜ್ಯದ 13ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿರುವ ತೊಗರಿಬೇಳೆ(ತೂರ್‌ದಾಲ್) ಯನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಕರ್ನಾಟಕ ಸರ್ಕಾರವು ನಫೆಡ್ ಮತ್ತು ಎನ್‌ಸಿಸಿಎಫ್ ಮುಖೇನ ಖರೀದಿಸಲು ಅನುಮೋದನೆ ನೀಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಸುದೀರ್ಘ ಪತ್ರ ಬರೆದಿದ್ದಾರೆ.
ಕೇಂದ್ರ ಸರ್ಕಾರದ ವಿಳಂಬದಿಂದಾಗಿ ಕರ್ನಾಟಕದ ತೊಗರಿ ಬೆಳೆಗಾರರು ಆರ್ಥಿಕ ಉಳಿವು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಾರಿಯ ಖಾರಿಫ್ ಋತುವಿನಲ್ಲಿ, ಸುಮಾರು 16.80 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, 12.60 ಲಕ್ಷ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಉತ್ಪಾದನೆಯಾಗುವ ನಿರೀಕ್ಷೆಯಿದೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ವಿಜಯಪುರ, ಕೊಪ್ಪಳ, ಬೆಳಗಾವಿ, ಬಳ್ಳಾರಿ, ವಿಜಯನಗರ, ಬಾಗಲಕೋಟೆ, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರಿಗೆ ತೊಗರಿಬೇಳೆ ಆದಾಯದ ಬೆನ್ನೆಲುಬಾಗಿದೆ ಎಂದು ವಿವರಿಸಿದ್ದಾರೆ.
ಪ್ರಸ್ತುತ, ಮಾರುಕಟ್ಟೆ ಬೆಲೆ ಕ್ವಿಂಟಾಲ್‌ಗೆ 5,830 ರೂಗಳಿಂದ 6,700 ರೂ ಇದೆ. ಆದರೆ 2025-26ರಲ್ಲಿ ತೊಗರಿಬೇಳೆಗೆ ಘೋಷಿಸಲಾದ ಕನಿಷ್ಠ ಬೆಂಬಲ ಬೆಲೆ ಕ್ವಿಂಟಲ್‌ಗೆ 8,000 ರೂಗಳಷ್ಟಿದೆ.
ಡಿಸೆಂಬರ್ 2025 ಮತ್ತು ಜನವರಿ 2026ರ ನಡುವೆ ಗರಿಷ್ಠ ಬೆಳೆ ಆಗಮನದ ನಿರೀಕ್ಷೆಯಿದೆ, ಆದರೆ ಕೇಂದ್ರ ಫೆಬ್ರವರಿ ಮತ್ತು ಮಾರ್ಚ್ನಲ್ಲಿ ಮಾತ್ರ ಖರೀದಿ ಕೇಂದ್ರಗಳನ್ನು ತೆರೆಯುತ್ತದೆ. ಕೇಂದ್ರ ಸರ್ಕಾರವು ಸಕಾಲಿಕ ಮತ್ತು ನಿರ್ಣಾಯಕ ಕ್ರಮ ಕೈಗೊಳ್ಳದ ಹೊರತು ರೈತರು ಗಂಭೀರ ಆದಾಯ ಆಘಾತವನ್ನು ಎದುರಿಸಬೇಕಾಗುತ್ತದೆಂದು ಮುಖ್ಯಮಂತ್ರಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಈ ನಿರ್ಣಾಯಕ ಹಂತದಲ್ಲಿ ಯಾವುದೇ ಮುಂದೂಡಿಕೆ ಅನಿವಾರ್ಯವಾಗಿ ರೈತರ ಅಶಾಂತಿ, ಬೆಲೆ ಕುಸಿತದಿಂದ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗುತ್ತದೆ. ಇದು ಸಹಕವಾಗಿಯೇ ಕೇಂದ್ರ ಮೇಲಿನ ನಂಬಿಕೆಯ ಪ್ರಶ್ನೆಯಾಗಿದೆ. ಹಾಗಾಗಿ ರೈತರ ಹಿತದೃಷ್ಟಿಯಿಂದ ತುರ್ತಾಗಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ























