ಬೆಳಗಾವಿ: ಯುಕೆಪಿ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಹಣಕಾಸು ಇಲಾಖೆ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಯೋಜನೆಗೆ ಅನುದಾನ ನೀಡಲು ಗ್ಯಾರಂಟಿ ಯೋಜನೆಗಳನ್ನು ಕೈ ಬಿಡಿ ಇಲ್ಲವೇ ಇಲಾಖೆಗಳ ಅನುದಾನದಲ್ಲಿ ಶೇ. 20 ರಷ್ಟು ಕಡಿತಗೊಳಿಸಿ ಎಂದು ಸಲಹೆ ನೀಡಿದೆ. ಇದರಿಂದಾಗಿ ಯುಕೆಪಿ ಯೋಜನೆಗೆ ಅನುದಾನ ನೀಡಬೇಕೋ? ಗ್ಯಾರಂಟಿ ಯೋಜನೆಗಳಿಗೆ ಗದಾ ಪ್ರಹಾರ ಮಾಡಬೇಕೋ? ಇಲಾಖೆಯ ಅನುದಾನ ಕಡಿತಗೊಳಿಸಬೇಕೋ ಎಂಬ ಬರ್ಮುಡಾ ಟ್ರೈಂಯಂಗಲ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಲುಕಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ ಹೇಳಿದರು.
ಕೆಳಮನೆಯಲ್ಲಿ ಉತ್ತರ ಕರ್ನಾಟಕ ವಿಶೇಷ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಅವರು, ಉತ್ತರ ಕರ್ನಾಟಕ ಭಾಗದ ಪ್ರಶ್ನೆ ಬಂದಾಗ ನಾನು ಮುಖ್ಯಮಂತ್ರಿಗಳನ್ನು ಖಾರವಾಗಿ ಮಾತಿನ ಚುಚ್ಚು ನೀಡಲೇಬೇಕಾಗುತ್ತದೆ, ಬೇಜಾರು ಮಾಡಿಕೊಂಡರೂ ಪರವಾಗಿಲ್ಲ ಎಂದರು. 8 ಕ್ಕೂ ಹೆಚ್ಚು ಸಚಿವರು ಉತ್ತರ ಕರ್ನಾಟಕ ಭಾಗಕ್ಕೆ ಭೇಟಿ ನೀಡಿಲ್ಲ, ಈ ಸಚಿವರನ್ನು ಮುಖ್ಯಮಂತ್ರಿಗಳು ಕರೆದು ಪ್ರಶ್ನಿಸಬೇಕಿಲ್ಲವೇ? ಈ ತೆರನಾದ ಸಚಿವರನ್ನು ಕೂಡಲೇ ಸಂಪುಟದಿಂದ ಹೊರಹಾಕಿ ಹೊಸಬರಿಗೆ ಅವಕಾಶ ಮಾಡಿಕೊಡಿ ಎಂದರು.




















