ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಬಾಲಕಿಯರ ಬಾಲ್ಯ ವಿವಾಹ ಪ್ರಕರಣಗಳಲ್ಲಿ ಶೇ. 55 ಮತ್ತು ಬಾಲಕರಲ್ಲಿ ಶೇ. 88ರಷ್ಟು ಕುಸಿದಿದೆ. ಪೊಲೀಸ್ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹ ಯೋಗದೊಂದಿಗೆ ನಡೆಸಿದ ಜಾಗೃತಿ ಕಾರ್ಯಕ್ರಮಗಳು ಈ ಬದಲಾವಣೆಗೆ ಪ್ರಮುಖ ಕಾರಣವಾಗಿವೆ.
250ಕ್ಕೂ ಹೆಚ್ಚು ಎನ್‌ಜಿಓಗಳ ಒಕ್ಕೂಟವಾದ ಜಸ್ಟ್ ರೈಟ್ಸ್ ಫಾರ್ ಚಿಲ್ಡ್ರನ್ ಬಿಡುಗಡೆ ಮಾಡಿದ ಟಿಪ್ಪಿಂಗ್ ಪಾಯಿಂಟ್ ಟು ಝೀರೋ: ಎವಿಡೆನ್ಸ್ ಟುವರ್ಡ್ಸ್ ಎ ಚೈಲ್ಡ್ ಮ್ಯಾರೇಜ್ ಫ್ರೀ ಇಂಡಿಯಾ ಎಂಬ ಅಧ್ಯಯನ ವರದಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಾಲ್ಯ ವಿವಾಹ ಪ್ರಕರಣಗಳು ಹುಡುಗಿಯರಲ್ಲಿ ಶೇ. 69 ಹಾಗೂ ಹುಡುಗರಲ್ಲಿ ಶೇ. 72ರಷ್ಟು ಇಳಿಕೆಯಾಗಿದೆ. ಅಸ್ಸಾಂನಲ್ಲಿ ಶೇ. 84ರಷ್ಟು ಇಳಿಕೆ ದಾಖಲಾಗಿದ್ದು, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ತಲಾ ಶೇ. 70 ಹಾಗೂ ರಾಜಸ್ಥಾನದಲ್ಲಿ ಶೇ. 66ರಷ್ಟು ಇಳಿಕೆಯಾಗಿದೆ.
ಇತರ ರಾಜ್ಯಗಳಿಗಿಂತ ವಿಭಿನ್ನವಾಗಿ, ಕರ್ನಾಟಕದಲ್ಲಿ ಬಾಲ್ಯ ವಿವಾಹ ಪ್ರಕರಣಗಳನ್ನು ವರದಿ ಮಾಡಲು ಹೆಚ್ಚು ಜನರು ಪೊಲೀಸ್ ಠಾಣೆಗಳಿಗಿಂತ ಸಹಾಯವಾಣಿ ಸೇವೆಗಳು (ಶೇ. 75) ಹಾಗೂ ಮಕ್ಕಳ ಕಲ್ಯಾಣ ಸಮಿತಿಗಳ (ಶೇ. 53) ಸಹಾಯವನ್ನು ಪಡೆದಿದ್ದಾರೆ. ಇದು ಸಮುದಾಯ ಆಧಾರಿತ ಸಹಕಾರ ವ್ಯವಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ರಾಜ್ಯದಲ್ಲಿ ಬಾಲ್ಯ ವಿವಾಹ ತಡೆಗೆ ಪ್ರಮುಖ ಕಾರಣವೆಂದರೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮದುವೆಗಳ ನೋಂದಣಿಯ ಅಧಿಕಾರ ನೀಡಿರುವುದು. ಈ ಕ್ರಮವು ಗ್ರಾಮೀಣ ಮಟ್ಟದಲ್ಲಿ ಆಡಳಿತ ನಡೆಸುವ ಪಿಡಿಓಗಳ ಮೂಲಕ ಅರಿವು ಮೂಡಿಸುವಲ್ಲಿ ಸಹಾಯವಾಗಿದೆ. ಇದರ ಪರಿಣಾಮವಾಗಿ, ಕೇವಲ 2021ರಲ್ಲಿಯೇ ಸುಮಾರು 2,000 ಬಾಲ್ಯ ವಿವಾಹಗಳು ತಡೆಯಲ್ಪಟ್ಟಿವೆ. ಅಪ್ರಾಪ್ತರ ನಿಶ್ಚಿತಾರ್ಥವನ್ನೂ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಿ ಕಾಯ್ದೆಗೆ ತಿದ್ದುಪಡಿ ಮಾಡಿದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಕರ್ನಾಟಕದಲ್ಲಿ ಬಾಲಕರಲ್ಲಿ ಶೇ. 88ರಷ್ಟು ಬಾಲ್ಯವಿವಾಹ ಇಳಿಕೆ
ರಾಷ್ಟ್ರೀಯ ಮಟ್ಟದಲ್ಲಿ ಬಾಲಕಿಯರ ವಿವಾಹ ಇಳಿಕೆ ಪ್ರಮಾಣ ಶೇ. 69
ರಾಷ್ಟ್ರೀಯ ಮಟ್ಟದಲ್ಲಿ ಬಾಲಕರ ವಿವಾಹ ಇಳಿಕೆ ಪ್ರಮಾಣ ಶೇ. 72
ಈ ಎಲ್ಲಾ ಸಾಧನೆಗಳ ನಡುವೆಯೂ ಕೆಲವು ಪ್ರಮುಖ ಸವಾಲುಗಳು ಉಳಿದಿವೆ. ಸಾಮಾಜಿಕ ಮುಜುಗರದ ಭಯ (ಶೇ. 79) ಮತ್ತು ಅರಿವಿನ ಕೊರತೆ (ಶೇ. 62) ಕಾರಣದಿಂದ ಬಾಲ್ಯ ವಿವಾಹದ ಪ್ರಕರಣಗಳು ಸರಿಯಾಗಿ ವರದಿ ಆಗುತ್ತಿಲ್ಲ. ಉದಾಹರಣೆಗೆ, 2011ರ ಜನಗಣತಿಯಲ್ಲಿ ಕರ್ನಾಟಕದಲ್ಲಿ 4.8 ಲಕ್ಷ ಅಪ್ರಾಪ್ತರು ಮದುವೆಯಾದ ಬಗ್ಗೆ ದಾಖಲಾಗಿದ್ದರೂ, 2019-2022ರ ನಡುವೆ ಕೇವಲ 783 ಪ್ರಕರಣಗಳು ಮಾತ್ರ ವರದಿಯಾಗಿವೆ.