ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಆರೋಪ: ರಾಜ್ಯಾದ್ಯಂತ ಲ್ಯಾಬ್ ಪರೀಕ್ಷೆಗೆ ಸೂಚನೆ

0
1

ತಪ್ಪು ಕಂಡುಬಂದರೆ ಕಠಿಣ ಕ್ರಮ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಪ್ರೋಟಿನ್‌ನ ಪ್ರಮುಖ ಮೂಲವಾಗಿರುವ ಮೊಟ್ಟೆ ಅನೇಕ ಜನರ ದಿನನಿತ್ಯದ ಆಹಾರದಲ್ಲಿನ ಅವಿಭಾಜ್ಯ ಭಾಗ. ನಾನ್‌ ವೆಜಿಟೇರಿಯನ್ಸ್ ಮಾತ್ರವಲ್ಲದೆ ಕೆಲ ವೆಜಿಟೇರಿಯನ್ಸ್ ಕೂಡ ಮೊಟ್ಟೆಯನ್ನು ಆಹಾರವಾಗಿ ಬಳಸುತ್ತಾರೆ. ಆದರೆ ಇದೀಗ ಮೊಟ್ಟೆ ಪ್ರಿಯರಿಗೆ ಆತಂಕ ಹುಟ್ಟಿಸುವ ಸುದ್ದಿಯೊಂದು ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿದೆ.

ಜನಪ್ರಿಯ ಬ್ರಾಂಡ್‌ನ ಕೆಲವು ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿವೆ ಎಂಬ ಆರೋಪಗಳು ಕೇಳಿಬಂದಿದ್ದು, ಈ ಕುರಿತ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ (Nitrofuran) ಎಂಬ ಔಷಧದ ಕಣಗಳು ಕಂಡುಬಂದಿವೆ ಎನ್ನಲಾಗಿದ್ದು, ಇದು ಮಾನವ ದೇಹದ ಡಿಎನ್‌ಎಗೆ ಹಾನಿ ಮಾಡುವುದು, ಸಂತಾನೋತ್ಪತ್ತಿ ಅಂಗಗಳು, ರೋಗನಿರೋಧಕ ವ್ಯವಸ್ಥೆ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿದೆ. ಈ ರಾಸಾಯನಿಕ ದೀರ್ಘಾವಧಿಯಲ್ಲಿ ಸೇವಿಸಿದರೆ ಕ್ಯಾನ್ಸರ್‌ನಂತಹ ಭೀಕರ ಕಾಯಿಲೆಗಳಿಗೆ ಕಾರಣವಾಗಬಹುದು ಎಂಬುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.

ಇದನ್ನೂ ಓದಿ: ಎಸ್‌ಬಿಐ ಯೋನೊ 2.0 ಹೊಸ ಆ್ಯಪ್‌ ಇಂದು ಬಿಡುಗಡೆ

ಸರ್ಕಾರದ ಪ್ರತಿಕ್ರಿಯೆ: ಈ ಆರೋಪಗಳ ಕುರಿತು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ ನೀಡಿದ್ದು, ಈ ಹಿಂದೆ ಆಹಾರ ಸುರಕ್ಷತಾ ಇಲಾಖೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆಗಳಲ್ಲಿ ಯಾವುದೇ ಹಾನಿಕಾರಕ ಅಂಶಗಳು ಪತ್ತೆಯಾಗಿರಲಿಲ್ಲ. ಆದರೆ ಇತ್ತೀಚೆಗೆ ಕೇಳಿಬಂದ ಹೊಸ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ರಾಜ್ಯಾದ್ಯಂತ ಮೊಟ್ಟೆಗಳ ಮಾದರಿಗಳನ್ನು ಸಂಗ್ರಹಿಸಿ ಲ್ಯಾಬ್‌ಗಳಲ್ಲಿ ಕೂಲಂಕುಷ ಪರೀಕ್ಷೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

ತಪ್ಪು ಸಾಬೀತಾದರೆ ಕಠಿಣ ಕ್ರಮ: ಪರೀಕ್ಷಾ ವರದಿಗಳಲ್ಲಿ ಒಂದು ವೇಳೆ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾದರೆ, ಮೊಟ್ಟೆ ಉತ್ಪಾದಕರು ಹಾಗೂ ಸಂಬಂಧಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಹಾರ ಸುರಕ್ಷತಾ ಕಾಯ್ದೆಯಡಿ ದಂಡ ಹಾಗೂ ಇತರ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಕಛೇರಿಯಲ್ಲಿ ಹೆಚ್ಚು ಹೊತ್ತು ಕೂತು ಕೆಲಸ ಮಾಡುತ್ತೀರಾ? — ಬಾಲ ಮೂಳೆಯ ನೋವು ನಿಮ್ಮನ್ನು ಕಾಡಬಹುದು!

ಹಿಂದಿನ ಪರೀಕ್ಷೆಗಳ ವಿವರ: ಆರು ತಿಂಗಳ ಹಿಂದೆ ಆಹಾರ ಸುರಕ್ಷತಾ ಮತ್ತು ಔಷಧ ಆಡಳಿತ ಇಲಾಖೆ ನಡೆಸಿದ ಪರೀಕ್ಷೆಗಳಲ್ಲಿ ಮೊಟ್ಟೆಗಳಲ್ಲಿ ಯಾವುದೇ ಹಾನಿಕಾರಕ ರಾಸಾಯನಿಕ ಅಂಶಗಳು ಕಂಡುಬಂದಿರಲಿಲ್ಲ. ಆ ವೇಳೆ ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಅವರು, ಪ್ರಯೋಗಾಲಯ ವರದಿಗಳ ಆಧಾರದ ಮೇಲೆ ಮೊಟ್ಟೆಗಳು ಸಂಪೂರ್ಣವಾಗಿ ಸೇವನೆಗೆ ಸುರಕ್ಷಿತ ಎಂದು ಸ್ಪಷ್ಟಪಡಿಸಿದ್ದರು.

ಸಾರ್ವಜನಿಕರಲ್ಲಿ ಗೊಂದಲ: ಹಿಂದಿನ ವರದಿಗಳು ಮೊಟ್ಟೆ ಸುರಕ್ಷಿತವೆಂದು ಹೇಳಿದ್ದರೂ, ಈಗ ಹೊಸ ಆರೋಪಗಳು ಕೇಳಿಬಂದಿರುವುದರಿಂದ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ನಿಖರ ಸತ್ಯ ತಿಳಿಯಲು ಜನರು ಸರ್ಕಾರದ ಪರೀಕ್ಷಾ ವರದಿಗಳತ್ತ ಕಾದು ನೋಡುತ್ತಿದ್ದಾರೆ. ಅಂತಿಮ ವರದಿ ಹೊರಬರುವವರೆಗೆ ಆತಂಕ ಬೇಡ, ಅಧಿಕೃತ ಮಾಹಿತಿ ಮಾತ್ರ ನಂಬಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: ಭಾರತ ಸ್ಮಾಷ್ ತಂಡಕ್ಕೆ ಐತಿಹಾಸಿಕ ವಿಶ್ವಕಪ್ ಕಿರೀಟ

Previous articleಎಸ್‌ಬಿಐ ಯೋನೊ 2.0 ಹೊಸ ಆ್ಯಪ್‌ ಇಂದು ಬಿಡುಗಡೆ