ಬೆಂಗಳೂರು: ಯಾವುದೇ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವುದಿಲ್ಲ. ಬದಲಿಗೆ ಅಂತಹ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತನೆ ಮಾಡಲಿದ್ದೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ಮಹತ್ವದ ಹೇಳಿಕೆ ನೀಡಿದ್ದಾರೆ.
ವಾರ್ಷಿಕ ಆದಾಯ 1.20 ಲಕ್ಷ ರೂ. ಇರುವವರ ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗುತ್ತಿರುವ ಕ್ರಮ ವಿರೋಧಿಸಿ ಹಲವಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಕೆಲವು ಕಡೆ ಆತಂಕ ಮತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ಮುನಿಯಪ್ಪ ಅವರು, ಬಿಪಿಎಲ್‌ನಲ್ಲಿರುವ ಅನರ್ಹರನ್ನು ನಿಯಮಗಳ ಪ್ರಕಾರ ಪರಿಷ್ಕರಣೆ ಮಾಡಿ. ಎಪಿಎಲ್‌ಗೆ ವರ್ಗಾವಣೆ ಮಾಡುತ್ತೇವೆ. ಯಾವ ಕಾರ್ಡನ್ನೂ ರದ್ದು ಮಾಡುವುದಿಲ್ಲ ಎಂದಿದ್ದಾರೆ.
ಎಲ್ಲಾ ಕಾರ್ಡ್‌ಗಳನ್ನು ಪರಿಷ್ಕರಣೆ ಮಾಡುತ್ತೇವೆ. ಸಣ್ಣಪುಟ್ಟ ಸಮಸ್ಯೆಯಾದರೆ 24 ಗಂಟೆಯೊಳಗೆ ಅದನ್ನು ಸರಿಪಡಿಸಿ ಧಾನ್ಯ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಗ್ಯಾರಂಟಿ ಸಮಿತಿ ಸಂಪರ್ಕಿಸಿ: “ಬಿಪಿಎಲ್ ಕಾರ್ಡ್ ರದ್ದಾದರೆ ಅವರು ಗ್ಯಾರಂಟಿ ಅನುಷ್ಠಾನ ಸಮಿತಿ ಸಂಪರ್ಕ ಮಾಡಬೇಕು. ಬಿಪಿಎಲ್ ಕಾರ್ಡ್ ಸಮಸ್ಯೆಗಳ ಪರಿಹಾರ, ಗ್ಯಾರಂಟಿ ಯೋಜನೆಗಳ ನಿರ್ವಹಣೆಗೆ ಸಮಿತಿ ಮಾಡಲಾಗಿದೆ. ತುರ್ತಾಗಿ ಸ್ಪಂದಿಸಲು ಗ್ಯಾರಂಟಿ ಸಮಿತಿಗೆ ಮನವಿ ಮಾಡುತ್ತೇನೆ” ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ.