ಬೆಂಗಳೂರು: ಕ್ವಾಂಟಮ್ ಮೆಟೀರಿಯಲ್ಸ್ ಇನ್ನೋವೇಶನ್ ನೆಟ್‌ವರ್ಕ್‌ಗೆ ₹150 ಕೋಟಿ ಬೇಡಿಕೆ
ಬೆಂಗಳೂರು: ಭಾರತದ ತಂತ್ರಜ್ಞಾನ ರಾಜಧಾನಿ ಎಂದೇ ಹೆಸರಾಗಿರುವ ಬೆಂಗಳೂರಿನಲ್ಲಿ ಕ್ವಾಂಟಮ್ ಮೆಟೀರಿಯಲ್ಸ್ ಇನ್ನೋವೇಶನ್ ನೆಟ್‌ವರ್ಕ್ (Q-MINt) ಸ್ಥಾಪನೆಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಕ್ವಾಂಟಮ್ ಮಿಷನ್ (NQM) ನಿಧಿಯಿಂದ ₹150 ಕೋಟಿ ರೂ. ಆರ್ಥಿಕ ನೆರವು ಮಂಜೂರು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ.
‘ಕ್ವಾಂಟಮ್ ಸಿಟಿ’ ನಿರ್ಮಾಣದ ಭಾಗವಾಗಿ ಈ ಯೋಜನೆ ರೂಪಿತವಾಗಿದ್ದು, ಸಣ್ಣ ನೀರಾವರಿ ಹಾಗೂ ವಿಜ್ಞಾನ-ತಂತ್ರಜ್ಞಾನ ಇಲಾಖೆಯ ಸಚಿವ ಎನ್.ಎಸ್. ಬೋಸರಾಜು ಅವರ ನೇತೃತ್ವದಲ್ಲಿ ಸಂಪೂರ್ಣ ಪ್ರಸ್ತಾವನೆ ಸಿದ್ಧವಾಗಿದೆ.
‘ಜಾಗತಿಕ ಕ್ವಾಂಟಮ್ ಕ್ರಾಂತಿಯಲ್ಲೂ ನಾಯಕತ್ವ’: ಭಾರತವು ಕ್ವಾಂಟಮ್ ತಂತ್ರಜ್ಞಾನದಲ್ಲಿ ನಾಯಕತ್ವ ಸಾಧಿಸಲು ಬೆಂಗಳೂರು ಸೂಕ್ತ ವೇದಿಕೆಯಾಗಿದೆ ಎಂದು ಸರ್ಕಾರ ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಕುರಿತು ಸಚಿವ ಬೋಸರಾಜು ಅವರು ಕ್ವಾಂಟಮ್ ತಂತ್ರಜ್ಞಾನಕ್ಕೆ ಮೂಲ ಆಧಾರವೇ ಮೆಟೀರಿಯಲ್ಸ್ ಸಂಶೋಧನೆ. ಸಂಶೋಧನೆ ಮತ್ತು ಕೈಗಾರಿಕಾ ಬಳಸಿಕೆ ನಡುವಿನ ಅಂತರವನ್ನು ಕಡಿಮೆ ಮಾಡಲು Q-MINt ಗೇಮ್ ಚೇಂಜರ್ ಆಗಲಿದೆ. ಜಾಗತಿಕ ಕ್ವಾಂಟಮ್ ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾರತ ಹಾಗೂ ಬೆಂಗಳೂರನ್ನು ಮುಂಚೂಣಿಗೆ ತರುವ ಸಾಮರ್ಥ್ಯ ಈ ಯೋಜನೆ ಹೊಂದಿದೆ.” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಿಎಂ ಪತ್ರದ ಮುಖ್ಯ ಅಂಶಗಳು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ರದಲ್ಲಿ ಸ್ವಾವಲಂಬಿ ಕ್ವಾಂಟಮ್ ಅವಿಷ್ಕಾರ ಪರಿಸರ ನಿರ್ಮಾಣ. ವಸ್ತು ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯನ್ನು ಒಂದೇ ಕೇಂದ್ರದಲ್ಲಿ ಸ್ಥಾಪಿಸಲು ಹಾಗೂ ರಾಷ್ಟ್ರದ ಮಟ್ಟದಲ್ಲಿ ಕ್ವಾಂಟಮ್ ಸಂಶೋಧನಾ ಮೂಲಸೌಕರ್ಯ ನಿರ್ಮಾಣ ಹಾಗೂ ಉದ್ಯಮ-ವಿಜ್ಞಾನ ಸೇತುವೆ ಬಲಪಡಿಸಲು “Q-MINt ಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ದೇಶದ ಕ್ವಾಂಟಮ್ ಉದ್ಯಮಕ್ಕೆ ರಾಷ್ಟ್ರೀಯ ಸಂಪನ್ಮೂಲ ಕೇಂದ್ರವಾಗಲಿದೆ,” ಎಂದು ಸಿಎಂ ತಿಳಿಸಿದ್ದಾರೆ.
ಕ್ವಾಂಟಮ್ ತಂತ್ರಜ್ಞಾನ ಸಂಶೋಧನೆಯಲ್ಲಿ ಭಾರತವನ್ನು ಬಲಶಾಲಿ ರಾಷ್ಟ್ರವನ್ನಾಗಿ ರೂಪಿಸುವ ದೃಷ್ಟಿಯಿಂದ ಬೆಂಗಳೂರನ್ನು ಕ್ವಾಂಟಮ್ ಅವಿಷ್ಕಾರ ಪಾರುಗಾಣಿಕೆಯ ಕೇಂದ್ರವಾಗಿ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಗೆ ₹150 ಕೋಟಿ ರೂಪಾಯಿಗಳ ನೆರವಿನ ಬೇಡಿಕೆ ಇದೀಗ ಕೇಂದ್ರದ ಮುಂದೆ ಒತ್ತಾಯಿಸಲಾಗಿದೆ.









