ಬೆಳಗಾವಿ ರಣರಂಗ: ಲಾಠಿ ಏಟಿಗೆ ಕಲ್ಲೇಟಿನ ಉತ್ತರ, ಹೆದ್ದಾರಿಯಲ್ಲಿ ಹೈಡ್ರಾಮಾ!

0
6

ಬೆಳಗಾವಿ: ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳು ಕಬ್ಬು ಕಾರ್ಖಾನೆ ಮಾಲೀಕರೊಂದಿಗೆ ಸಂಧಾನ ಸಭೆ ನಡೆಸುತ್ತಿದ್ದರೆ, ಇತ್ತ ಬೆಳಗಾವಿಯ ರಾಷ್ಟ್ರೀಯ ಹೆದ್ದಾರಿ ಅಕ್ಷರಶಃ ರಣರಂಗವಾಗಿ ಮಾರ್ಪಟ್ಟಿದೆ.

ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿಪಡಿಸಬೇಕೆಂಬ ತಮ್ಮ ಬೇಡಿಕೆ ಈಡೇರಿಸಲು ಹೆದ್ದಾರಿ ತಡೆಗೆ ಮುಂದಾದ ಸಾವಿರಾರು ರೈತರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಇದರಿಂದ ಅನ್ನದಾತನ ಸಹನೆಯ ಕಟ್ಟೆಯೊಡೆದು, ಪ್ರತಿಯಾಗಿ ಪೊಲೀಸರ ವಾಹನಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಹತ್ತರಗಿ ಟೋಲ್‌ನಲ್ಲಿ ನಡೆದಿದ್ದೇನು?: ಶುಕ್ರವಾರ ಬೆಳಿಗ್ಗೆಯಿಂದಲೇ ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಗೇಟ್ ಬಳಿ ಸಾವಿರಾರು ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಜಮಾಯಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ರಾಷ್ಟ್ರೀಯ ಹೆದ್ದಾರಿ-4 ಅನ್ನು ಬಂದ್ ಮಾಡಲು ಮುಂದಾದರು. ಈ ವೇಳೆ, ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದರು.

ಪೊಲೀಸರ ಈ ಅನಿರೀಕ್ಷಿತ ನಡೆಯಿಂದ ರೊಚ್ಚಿಗೆದ್ದ ರೈತರು, ಹಿಂಸಾಚಾರಕ್ಕೆ ತಿರುಗಿದರು. ಕೈಗೆ ಸಿಕ್ಕ ಕಲ್ಲುಗಳನ್ನು ಪೊಲೀಸ್ ವಾಹನಗಳತ್ತ ಎಸೆದರು. ರೈತರ ಆಕ್ರೋಶದ ಕಟ್ಟೆಯೊಡೆದಿದ್ದನ್ನು ಕಂಡು, ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಹತ್ತರಗಿ ಟೋಲ್ ಗೇಟ್‌ನಿಂದ ಕಾಲ್ತೆಗೆಯುವಂತಾಯಿತು. ಈ ಘಟನೆಯಿಂದಾಗಿ ಸ್ಥಳದಲ್ಲಿ ತಿವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಒಂದೆಡೆ ಸಂಧಾನ, ಮತ್ತೊಂದೆಡೆ ಸಂಘರ್ಷ: ಇದು ಕೇವಲ ಇಂದಿನ ಆಕ್ರೋಶವಲ್ಲ. ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಇಂದು 9ನೇ ದಿನಕ್ಕೆ ಕಾಲಿಟ್ಟಿದೆ. ಒಂದು ಕಡೆ ಸರ್ಕಾರ ಬೆಂಗಳೂರಿನಲ್ಲಿ ಸಭೆಗಳ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ಬೀದಿಗಿಳಿದಿರುವ ರೈತರ ಆಕ್ರೋಶ ಸ್ಫೋಟಗೊಳ್ಳುತ್ತಿದೆ. ಇದು ಸರ್ಕಾರ ಮತ್ತು ರೈತರ ನಡುವಿನ ಸಂವಹನದ ಕೊರತೆಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ.

ಬಲಪ್ರಯೋಗ ಮಾಡಿಲ್ಲ ಎಂದ ಗೃಹ ಸಚಿವರು: ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್, “ಪೊಲೀಸರಿಗೆ ಸಂಯಮದಿಂದ ವರ್ತಿಸಲು ಸೂಚಿಸಲಾಗಿದೆ. ರೈತರ ಮೇಲೆ ಯಾವುದೇ ಬಲಪ್ರಯೋಗ ಮಾಡಬಾರದು ಎಂದು ಹೇಳಿದ್ದೇವೆ. ಪೊಲೀಸರ ಪ್ರಕಾರ, ಅವರು ಲಾಠಿ ಚಾರ್ಜ್ ಮಾಡಿಲ್ಲ,” ಎಂದು ತಿಳಿಸಿದ್ದಾರೆ. “ರೈತರು ದಯಮಾಡಿ ಸರ್ಕಾರಕ್ಕೆ ಸಹಕರಿಸಬೇಕು. ನಮ್ಮ ಉದ್ದೇಶ ಚರ್ಚೆಯ ಮೂಲಕ ಸಮಸ್ಯೆಯನ್ನು ಬಗೆಹರಿಸುವುದೇ ಆಗಿದೆ,” ಎಂದು ಅವರು ಮನವಿ ಮಾಡಿದ್ದಾರೆ.

Previous articleವೀಲ್‌ಚೇರ್‌ನಲ್ಲೇ ಜಗತ್ತನ್ನು ನಡುಗಿಸುವ ‘ಕುಂಭ’: ರಾಜಮೌಳಿಯ ಹೊಸ ವಿಲನ್‌ಗೆ ಹಾಲಿವುಡ್ ಸ್ಪೂರ್ತಿಯೇ?
Next articleಬಾಗಲಕೋಟೆ: ಗದ್ದನಕೇರಿ ಕ್ರಾಸ್‌ನಲ್ಲಿ ರೈತರ ಆಕ್ರೋಶ, ಹೆದ್ದಾರಿ ಬಂದ್

LEAVE A REPLY

Please enter your comment!
Please enter your name here