VB-G RAM G: ರಾಜ್ಯ ಸರ್ಕಾರ ಕಾರ್ಮಿಕರಲ್ಲಿ ಭೀತಿ ಹುಟ್ಟಿಸುತ್ತಿದೆ

0
1

ಬೆಂಗಳೂರು: ಜಿ ರಾಮ್ ಜಿ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಕಾರ್ಮಿಕರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಗಂಭೀರ ಆರೋಪ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್‌ ಮಾಡಿರುವ ಅವರು, ಹಿಂದಿನ ನರೇಗಾ ಯೋಜನೆಯಲ್ಲಿ ವರ್ಷಕ್ಕೆ 100 ದಿನಗಳ ಉದ್ಯೋಗ ಖಾತ್ರಿ ಇತ್ತು. ಕೇಂದ್ರ ಸರ್ಕಾರ ಅದನ್ನು 125 ದಿನಗಳಿಗೆ ಹೆಚ್ಚಿಸಿದೆ. ಆದರೆ ಈ ಹೆಚ್ಚುವರಿ ದಿನಗಳನ್ನು ಯಾವ ಸಮಯದಲ್ಲಿ ಹೇಗೆ ಬಳಸಬೇಕು ಎಂಬ ನಿರ್ಧಾರವನ್ನು ಗ್ರಾಮ ಪಂಚಾಯತಿಗಳಿಗೆ ಸಂಪೂರ್ಣ ಸ್ವತಂತ್ರವಾಗಿ ನೀಡಲಾಗಿದೆ. ಆದರೂ ಕೇಂದ್ರ ಸರ್ಕಾರವೇ ದಿನಗಳನ್ನು ನಿರ್ಧರಿಸುತ್ತದೆ ಎಂಬ ಭೀತಿಯನ್ನು ರಾಜ್ಯ ಸರ್ಕಾರ ಕಾರ್ಮಿಕರಲ್ಲಿ ಹುಟ್ಟಿಸುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:  ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ರಾಷ್ಟ್ರ ಮಟ್ಟದಲ್ಲಿ 3ನೇ ಸ್ಥಾನ

ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಸಹಕಾರಿಯಾಗುವಂತೆ ವರ್ಷದಲ್ಲಿ ಎರಡು ಬಾರಿ ಒಟ್ಟು 60 ದಿನಗಳ ಕಾಲ ಉದ್ಯೋಗ ಖಾತ್ರಿ ಕೆಲಸಗಳಿಗೆ ಕೃಷಿಗೋಸ್ಕರ ರಜೆ ನೀಡಲಾಗಿದೆ. ಇದು ದೇಶದಾದ್ಯಂತ ರೈತರ ಬೇಡಿಕೆಗೆ ಅನುಗುಣವಾಗಿ ಜಾರಿಗೆ ತಂದಿರುವ ವ್ಯವಸ್ಥೆಯಾಗಿದೆ. ಆದರೆ ರಾಜ್ಯ ಸರ್ಕಾರ ಇದನ್ನು ಆಕ್ಷೇಪಿಸುವ ಮೂಲಕ ರೈತ ವಿರೋಧಿ ಹಾಗೂ ಕೃಷಿ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

ಹೇಗಿದ್ದರೂ ವರ್ಷದಲ್ಲಿ 125 ದಿನಗಳ ಹೊರತು ಉಳಿದ ದಿನಗಳಲ್ಲಿ ಕಾರ್ಮಿಕರು ಬೇರೆ ವಲಯಗಳಲ್ಲಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಇದನ್ನು ಅರ್ಥ ಮಾಡಿಕೊಳ್ಳದೆ ರಾಜ್ಯ ಸರ್ಕಾರ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: 153 ಎಕರೆಗಳಲ್ಲಿ ‘ವಿಶ್ವಗುರು ಬಸವಣ್ಣ ಜೀವವೈವಿಧ್ಯ ಉದ್ಯಾನ’ – ಸಚಿವ ಸಂಪುಟದ ಒಪ್ಪಿಗೆ

ಜಿ ರಾಮ್ ಜಿ ಯೋಜನೆಯ ಪ್ರಕಾರ ಕಾರ್ಮಿಕರಿಗೆ ಕೆಲಸ ಮಾಡಿದ ಒಂದು ವಾರದಿಂದ ಹದಿನೈದು ದಿನಗಳೊಳಗೆ ಕಡ್ಡಾಯವಾಗಿ ವೇತನ ಪಾವತಿ ಮಾಡಬೇಕು ಎಂಬ ನಿಯಮ ಸ್ಪಷ್ಟವಾಗಿದೆ. ಆದರೂ ಅನುದಾನ ಸಿಗುತ್ತಿಲ್ಲ ಎಂಬ ನೆಪ ಮುಂದಿಟ್ಟು ರಾಜ್ಯ ಸರ್ಕಾರ ಕಾರ್ಮಿಕರನ್ನು ಯೋಜನೆಯಿಂದ ದೂರ ಮಾಡುತ್ತಿದೆ ಎಂದು ಆರೋಪಿಸಿದರು.

ನರೇಗಾ ಯೋಜನೆಯಲ್ಲಿ ಹಿಂದೆ ಭ್ರಷ್ಟಾಚಾರ, ನಕಲಿ ಕೂಲಿಕಾರರ ಹೆಸರುಗಳಲ್ಲಿ ವೇತನ ತೆಗೆಯುವ ಪ್ರಕರಣಗಳು ನಡೆದಿವೆ. ಈ ಸೋರಿಕೆ ತಡೆಯಲು ಬಯೊಮೆಟ್ರಿಕ್ ತಂತ್ರಜ್ಞಾನ ಬಳಸಲು ಕೇಂದ್ರ ಸರ್ಕಾರ ಮುಂದಾದರೆ, ಇದರಿಂದ ಕಾರ್ಮಿಕರಿಗೆ ವಂಚನೆ ಆಗುತ್ತದೆ ಎಂದು ರಾಜ್ಯ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ಬೊಮ್ಮಾಯಿ ಆಕ್ಷೇಪಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ವೆಚ್ಚ ಹಂಚಿಕೊಳ್ಳುವ ವ್ಯವಸ್ಥೆ ಇದ್ದು, ಇದರ ಮೂಲಕ ಹೆಚ್ಚು ದಿನ ಹೆಚ್ಚು ಜನರಿಗೆ ಉದ್ಯೋಗ ನೀಡಬಹುದು. ಆದರೆ ರಾಜ್ಯ ಸರ್ಕಾರ ಧುಂದು ವೆಚ್ಚ, ಅನಗತ್ಯ ಖರ್ಚು ಹಾಗೂ ಭ್ರಷ್ಟಾಚಾರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೇ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ:  VB-G RAM G: ರಾಜ್ಯಗಳನ್ನೇ ಮರೆತ ಕೇಂದ್ರ ಸರ್ಕಾರ

125 ದಿನಗಳ ಉದ್ಯೋಗ ಖಾತ್ರಿ ನೀಡುವುದರಿಂದ ಗ್ರಾಮೀಣ ಪ್ರದೇಶದ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಜೊತೆಗೆ ಬಡವರು, ಕಾರ್ಮಿಕರು, ದೀನ ದಲಿತರಿಗೆ ನ್ಯಾಯಸಮ್ಮತ ಕೆಲಸ ಮತ್ತು ಸಮಯಕ್ಕೆ ಸರಿಯಾದ ವೇತನ ಸಿಗುತ್ತದೆ. ಯೋಜನೆ ರೂಪಿಸುವ ಹಾಗೂ ಅನುಷ್ಠಾನ ಮಾಡುವ ಸಂಪೂರ್ಣ ಅಧಿಕಾರ ಪಂಚಾಯತಿಗಳಿಗೆ ಸಿಗುತ್ತದೆ. ರಾಜ್ಯ ಸರ್ಕಾರದ ಅನಗತ್ಯ ಮಧ್ಯಪ್ರವೇಶದಿಂದ ಯೋಜನೆ ಮುಕ್ತವಾಗುತ್ತದೆ ಎಂದಿದ್ದಾರೆ.

ಗ್ರಾಮೀಣ ಅವಶ್ಯಕತೆಗಳಿಗೆ ಅನುಗುಣವಾಗಿ ಆಸ್ತಿಗಳ ನಿರ್ಮಾಣವಾಗುತ್ತಿದ್ದು, ಗ್ರಾಮೀಣ ಅಭಿವೃದ್ಧಿಯ ಮೂಲಕ ವಿಕಸಿತ ಭಾರತದ ಗುರಿ ಸಾಧಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Previous articleVB-G RAM G: ರಾಜ್ಯಗಳನ್ನೇ ಮರೆತ ಕೇಂದ್ರ ಸರ್ಕಾರ