ಬ್ಯಾಲೆಟ್ ಪೇಪರ್‌ಗೆ ಕಾಯ್ದೆ ತಿದ್ದುಪಡಿ ಬೇಡ?

0
69

ಶಿವಕುಮಾರ್ ಮೆಣಸಿನಕಾಯಿ

ರಾಜ್ಯ ಚುನಾವಣಾ ಆಯೋಗಕ್ಕೆ ಸುಗ್ರೀವಾಜ್ಞೆ ಮೂಲಕ ಮತಪಟ್ಟಿ ಸಿದ್ಧತೆ ಹಾಗೂ ಮತಪತ್ರ ಮೂಲಕ ಚುನಾವಣೆ ಅಧಿಕಾರ ನೀಡಲು ಮುಂದಾಗಿದ್ದ ಸಂಪುಟ ಮರು ಚಿಂತನೆಗೆ ಮುಂದಾಗಿದೆ. ಮತಗಳತನಕ್ಕೆ ಸೆಡ್ಡು ಹೊಡೆಯಲು ಆಯೋಗಕ್ಕೆ ಮತಪಟ್ಟಿ ತಯಾರಿಕೆ ಮತ್ತು ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸುವ ಅಧಿಕಾರ ಈಗಾಗಲೇ ಹಾಲಿ ಇರುವ ಕಾಯ್ದೆಯಲ್ಲೇ ಲಭ್ಯವಿರುವುದರಿಂದ ಕಾಯ್ದೆಗಳಿಗೆ ತಿದ್ದುಪಡಿ ಬೇಕಿಲ್ಲ ಎನ್ನುತ್ತಾರೆ ತಜ್ಞರು.

ಏನಿದೆ ಅವಕಾಶ?

  • ಮತಪಟ್ಟಿ ಸಿದ್ಧಪಡಿಸುವ ಅಧಿಕಾರ. ಆರ್ಟಿಕಲ್ 243ಕೆ ಮತ್ತು 243ಜೆಡ್‌ ಎ ಅನ್ವಯ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಚುನಾವಣೆಗಳ ಮತಪಟ್ಟಿ ಸಿದ್ಧಪಡಿಸುವ ಅಧಿಕಾರವನ್ನು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರತ್ಯಾಯೋಜಿಸಲಾಗಿದೆ.
  • ಬ್ಯಾಲೆಟ್ ಪೇಪರ್ ಅಥವಾ ಇವಿಎಂ. 1993ರ ಕಾಯ್ದೆಗೆ 1998ರಲ್ಲಿ ತಿದ್ದುಪಡಿ ತಂದು ಬ್ಯಾಲೆಟ್ ಪೇಪರ್ ಅಥವಾ ಇವಿಎಂ ಮೂಲಕ ಚುನಾವಣೆ ನಡೆಸುವುದು ಎಂದು ಸೇರ್ಪಡೆ ಮಾಡಲಾಗಿದೆ.

ಏನಿವೆ ಆಯ್ಕೆಗಳು?: ಒಂದು ವೇಳೆ ರಾಜಕೀಯವಾಗಿ ಮತಗಳ್ಳತನ ಹೋರಾಟ ನಡೆಸುವುದಾದರೆ ಸದ್ಯ ರಾಜ್ಯ ಚುನಾವಣಾ ಆಯೋಗವು ಜಿಲ್ಲಾ ಪಂಚಾಯತಿ ಚುನಾವಣೆಗೆ ಬಳಕೆ ಮಾಡಿದ ಮತಪಟ್ಟಿಯನ್ನೇ ಗ್ರಾಮ ಪಂಚಾಯತಿ ಚುನಾವಣೆಗೆ ಬಳಸುವುದು ಕಡ್ಡಾಯ.

ಮತ್ತೊಂದೆಡೆ ಮತಪತ್ರ, ಇವಿಎಂ ಎರಡಕ್ಕೂ ಅವಕಾಶ ಇರುವ ಕಾಯ್ದೆಗೆ ತಿದ್ದುಪಡಿ ತಂದು ಕೇವಲ ಬ್ಯಾಲೆಟ್ ಪೇಪರ್ ಮಾತ್ರ ಎಂದು ತಿದ್ದುಪಡಿ ತರಬಹುದು. ಇವೆರಡೂ ತಿದ್ದುಪಡಿ ಇಲ್ಲದೆಯೂ ಸರಕಾರ ಬ್ಯಾಲೆಟ್ ಮೂಲಕವೇ ಚುನಾವಣೆ ನಡೆಸಬಹುದು.

ಇದೇ ವೇಳೆ ಹಾಲಿ ಕಾಯ್ದೆಯಲ್ಲಿ ಮತಪಟ್ಟಿ ಮತ್ತು ಬ್ಯಾಲೆಟ್ ಪೇಪರ್ ಎರಡಕ್ಕೂ ಪ್ರತ್ಯೇಕ ನಿಯಮಗಳಲ್ಲಿ ಅವಕಾಶ ಇದ್ದರೂ ಹೊಸದಾಗಿ ತಿದ್ದುಪಡಿ ತರುವ ಮೂಲಕ ಈ ಎರಡೂ ಉದ್ದೇಶಗಳಿಗೆ ಸ್ಪಷ್ಟ ತಿದ್ದುಪಡಿ ತಂದರೆ ರಾಜಕೀಯವಾಗಿ ಮತದಾರರಲ್ಲಿ ಜಾಗೃತಿ ಮೂಡಿಸಿದಂತೆ ಆಗುತ್ತದೆ. ಅಲ್ಲದೇ ಭವಿಷ್ಯದಲ್ಲಿ ಇಡೀ ದೇಶದ ಎಲ್ಲ ರಾಜ್ಯಗಳು ಈ ಮಾದರಿ ಅನುಸರಿಸಲು ದಾರಿ ಆಗುತ್ತದೆ ಎಂಬ ಚಿಂತನೆಯೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ಬಂದಿದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.

ಕನಿಷ್ಠ ಪಕ್ಷ ಕೇಂದ್ರ ಚುನಾವಣಾ ಆಯೋಗದ ಸಂಶಯಾತ್ಮಕ ಚುನಾವಣಾ ಪ್ರಕ್ರಿಯೆ ಬಗ್ಗೆ ಬಹಿರಂಗ ಅಸಮಾಧಾನ ಹೊರಹಾಕಿರುವ ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್‌ನಂತಹ ರಾಜ್ಯಗಳು ಆಯಾ ರಾಜ್ಯ ಚುನಾವಣಾ ಆಯೋಗಗಳ ಮೂಲಕವೇ ಸೆಡ್ಡು ಹೊಡೆಯಲು ಕರ್ನಾಟಕ ಮಾದರಿ ಆಗಲಿದೆ ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

Previous articleಶಿವಮೊಗ್ಗ: ವಿಮಾನ ನಿಲ್ದಾಣ ನಿರ್ವಹಣೆ ರಾಜ್ಯಕ್ಕೆ ಕೊಟ್ಟು ತಪ್ಪು ಮಾಡಿದೆ!

LEAVE A REPLY

Please enter your comment!
Please enter your name here