ಭೈರಪ್ಪ ಹೊಯ್ಸಳ ಕರ್ನಾಟಕ ಬ್ರಾಹ್ಮಣ ಮನೆತನಕ್ಕೆ ಸೇರಿದವರು. ಹಳೇ ಮೈಸೂರು ಭಾಗದ ಬ್ರಾಹ್ಮಣ ಸಮುದಾಯದಲ್ಲಿ ಸ್ವಲ್ಪಮಟ್ಟಿಗೆ ಅಪರೂಪದ ಹೆಸರಿದು. ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಶೆಟ್ಟಿಕೆರೆಯ ಭೈರಾದೇವರು ವಂಶದ ಕುಲದೈವವಾಗಿದ್ದರಿಂದ ಈ ಹೆಸರು ಬಂದಿತು.
ಮೈಸೂರಿಗೆ ಓದಲು ಹೋದ ಮೇಲೆ ಈ ಹೆಸರನ್ನು ಬದಲಿಸಿಕೊಳ್ಳುವ ಆಲೋಚನೆ ಭೈರಪ್ಪನವರಿಗೆ ಬಂದಿತ್ತು. ಆದರೆ ಹೆಸರಿನಲ್ಲೇನಿದೆ? ಅಮರನಾಥ ಎನಿಸಿಕೊಂಡಿದ್ದರಿಂದ ಅಮಾಸೆಗೌಡನ ಬಣ್ಣ ಬಿಳುಪಾಗಲಿಲ್ಲ. ಹಾಗೆಯೇ ಅವನೇನೂ ಭಾರೀ ಕ್ರಿಕೆಟ್ ಪಟುವಾಗುವುದಿಲ್ಲ (ಮೊಹಿಂದರ್ ಅಮರನಾಥ್ ರೀತಿ)' ಎಂಬುದು ಭೈರಪ್ಪನವರ ನಿಲುವಾಗಿತ್ತು.
ಹೆಸರಿಗೆ ಮಹತ್ವ ತಂದುಕೊಡುವುದು ವ್ಯಕ್ತಿತ್ವವೇ ಹೊರತು, ಹೆಸರಿನಿಂದ ವ್ಯಕ್ತಿತ್ವಕ್ಕೆ ಮೆರುಗು ಬರುವುದಿಲ್ಲ’ ಎಂಬುದಾಗಿ ಆತ್ಮಕಥೆ `ಭಿತ್ತಿ’ಯಲ್ಲಿ ಬರೆಯುತ್ತಾರೆ ಭೈರಪ್ಪ.
ಹುಬ್ಬಳ್ಳಿಯ ಕಾಡಸಿದ್ಧೇಶ್ವರ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಲು ಹೆಸರೂ ಪರೋಕ್ಷವಾಗಿ ನೆರವಿಗೆ ಬಂದಿತ್ತು. ಭೈರಪ್ಪ ಎಂಬುದು ಒಂದು ಸಮುದಾಯದ ಹೆಸರು ಎಂಬ ನಂಬಿಕೆ ಕೆಲಸ ಮಾಡಿತ್ತು. ಆ ದಿನಗಳಲ್ಲಿ ಕೂಡ ಕರ್ನಾಟಕದಲ್ಲಿ ಜಾತೀಯ ಭಾವನೆ ದಟ್ಟವಾಗಿತ್ತು ಎಂಬುದಾಗಿ ಅವರು ಆತ್ಮಕಥೆಯಲ್ಲಿ ಹೇಳುವುದರ ಹಿಂದೆ ಆಳವಾದ ನೋವಿದೆ.
ಗುಜರಾತಿನಿಂದ ಮೈಸೂರಿಗೆ ಬಂದಿದ್ದು ಹೇಗೆ?: ಪ್ರತಿಭೆ, ಸೃಷ್ಟಿಶೀಲ ವ್ಯಕ್ತಿತ್ವ ಹಾಗೂ ಭಾವನೆಗಳಿಗೆ ಹುಬ್ಬಳ್ಳಿ ವಾತಾವರಣಕ್ಕಿಂತ ದೊಡ್ಡದೇನೋ ಬೇಕು. ಬೆಳವಣಿಗೆ ಆಗಬೇಕು ಎಂಬ ತುಡಿತ ಅವರನ್ನು ಗುಜರಾತಿನ ಆನಂದದ `ಸರ್ದಾರ ಪಟೇಲ್ ವಿದ್ಯಾಪೀಠ’ಕ್ಕೆ (ವಿಶ್ವವಿದ್ಯಾಲಯ) ಕರೆದೊಯ್ದಿತು. ತತ್ತ್ವಶಾಸ್ತ್ರದ ಉಪನ್ಯಾಸಕರಾಗಿ ಆನಂದದಲ್ಲಿ ಭೈರಪ್ಪ ಒಳ್ಳೆಯ ಹೆಸರು ಗಳಿಸಿದರು. ಗುಜರಾತ್‌ನ ಬೌದ್ಧಿಕ ವಲಯದ ಭಾಗವಾದರು. ಮಹತ್ವದ ಕೃತಿಗಳ ಕೃಷಿಯೂ ಆನಂದದಲ್ಲೇ ಆಯಿತು. ಆ ನಂತರ ಬೆಳವಣಿಗೆಯ ಇನ್ನೊಂದು ಮಜಲಾಗಿ ಎನ್‌ಸಿಇಆರ್‌ಟಿ ಸಂಸ್ಥೆಯ ರೀಡರ್ ಹುದ್ದೆಗೆ ದೆಹಲಿಗೆ ಹೋದ ನಂತರ ಇಡೀ ಭಾರತದ ಸಂಸ್ಕೃತಿ ಮತ್ತು ಸಮಾಜವನ್ನು ಅಧ್ಯಯನ ಮಾಡಿದ್ದನ್ನು ಅವರ ಕೃತಿಗಳಲ್ಲಿ ಕಾಣಬಹುದು.
ದೇ.ಜವರೇಗೌಡರು (ದೇ.ಜ.ಗೌ.) ಮೈಸೂರು ವಿಶ್ವವಿದ್ಯಾಲಯದ ಕುಲಪತಿಯಾಗುವ ಹೊತ್ತಿಗೆ ಭೈರಪ್ಪ ಕಾದಂಬರಿಕಾರರಾಗಿ ಪ್ರಖ್ಯಾತರಾಗಿದ್ದರು. ಕನ್ನಡದ ನೆಲಕ್ಕೆ ಮರಳಬೇಕು ಎಂಬ ಬಯಕೆ ತೀವ್ರವಾಗಿತ್ತು. ಮೈಸೂರಿನಲ್ಲಿ ಎನ್‌ಸಿಇಆರ್‌ಟಿ ಸಂಸ್ಥೆಯ ಕಾಲೇಜು ಇತ್ತು. ಅದು ದೇಜಗೌ ಕುಲಪತಿಯಾಗಿದ್ದ ಮೈಸೂರು ವಿ.ವಿ. ಅಧೀನಕ್ಕೆ ಬರುತ್ತಿತ್ತು. ಮೈಸೂರಿಗೆ ವರ್ಗಾಯಿಸಿಕೊಡುವಂತೆ ಸಂಸ್ಥೆಯ ನಿರ್ದೇಶಕರಾಗಿದ್ದ ಕನ್ನಡಿಗ ಅಯ್ಯ ಎಂಬುವರಿಗೆ ಭೈರಪ್ಪ ಕೇಳಿದರು. ಅಯ್ಯನವರು ದೇಜಗೌ ಅವರ ಬಳಿ ಪ್ರಸ್ತಾಪ ಸಲ್ಲಿಸಿ, ಭೈರಪ್ಪ ಇಲ್ಲಿ ಬಂದರೆ ತಮ್ಮ ಆಕ್ಷೇಪ ಇದೆಯೇ' ಎಂದು ಕೇಳಿದರು. ಕುಲಪತಿಯಾಗಿದ್ದ ದೇಜಗೌ ಸಂತೋಷದಿಂದ ಒಪ್ಪಿ,
ಇಂತಹ ಲೇಖಕರು ಕರುನಾಡಿನಲ್ಲೇ ಇರಬೇಕು’ ಎಂದರು. ಪರಿಣಾಮ 1971ರಲ್ಲಿ ಭೈರಪ್ಪ ಮೈಸೂರಿನ ಎನ್‌ಸಿಇಆರ್‌ಟಿ ಕೇಂದ್ರಕ್ಕೆ ವರ್ಗಾವಣೆಯಾಗಿ ಕರ್ನಾಟಕಕ್ಕೆ ಮರಳಿದರು. ತಾವು ಕಲಿತು ಬೆಳೆದ ನಗರದಲ್ಲೇ ಉಳಿದುಕೊಂಡು ವೃತ್ತಿಜೀವನ ಮುಗಿಸಿದ್ದು; ಕನ್ನಡ ಸಾಹಿತ್ಯ ಕ್ಷೇತ್ರ ಮತ್ತು ಕರ್ನಾಟಕದ ಸಮಾಜವನ್ನು ಪ್ರಭಾವಿಸಿದ್ದು ಅವಿಸ್ಮರಣೀಯ ಇತಿಹಾಸ.