ಹಾವಿನ ವಿಷ ಪತ್ತೆಗೆ ಕನ್ನಡಿಗನಿಂದ ಸೋವಿ ಕಿಟ್!

0
1

ಬೆಂಗಳೂರು: ಗ್ರಾಮೀಣ ಹಾಗೂ ಅರಣ್ಯ ಪ್ರದೇಶಗಳಲ್ಲಿ ಹಾವು ಕಚ್ಚಿದಾಗ ಸಕಾಲದಲ್ಲಿ ಚಿಕಿತ್ಸೆ ಸಿಗದೆ ಪರದಾಡುವವರ ಸಂಖ್ಯೆ ಇಂದಿಗೂ ದೊಡ್ಡದಿದೆ. ಆದರೆ ಇನ್ನು ಮುಂದೆ ಹಾವು ಕಚ್ಚಿತೆಂದು ಭಯಪಡುವ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದಕ್ಕೆ ನಮ್ಮದೇ ರಾಜ್ಯದ ವಿಜ್ಞಾನಿಯೊಬ್ಬರು ಪರಿಹಾರ ಕಂಡು ಹಿಡಿದಿದ್ದು, ಹಾವಿನ ವಿಷವನ್ನು ಕ್ಷಣಮಾತ್ರದಲ್ಲಿ ಪರೀಕ್ಷಿಸುವ ಕ್ರಾಂತಿಕಾರಿ ಮೆಡಿಕಲ್ ಕಿಟ್‌ಅನ್ನು ಅಭಿವೃದ್ಧಿಪಡಿಸಿದ್ದಾರೆ.

ಮೂಲತಃ ಕಾಸರಗೋಡು ಜಿಲ್ಲೆಯ ಎಡನೀರು ಗ್ರಾಮದವರಾದ, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಡಾ. ಶ್ಯಾಮ ಭಟ್ ಅವರು ಈ ಕಿಟ್ ಅನ್ನು ತಯಾರಿಸಿದ್ದಾರೆ. ಹಾವಿನ ವಿಷವನ್ನು ಎರಡೇ ನಿಮಿಷದಲ್ಲಿ ಪತ್ತೆಹಚ್ಚುವ ಸಲುವಾಗಿ ತಯಾರಿಸಲಾದ ಈ ಕಿಟ್‌ಗೆ `ಸ್ನೇಕ್ ವಿನಮ್ ರ‍್ಯಾಪಿಡ್ ಟೆಸ್ಟ್ ಕಿಟ್’ ಎಂದು ಹೆಸರಿಸಲಾಗಿದೆ. ಕೇಂದ್ರ ಸರ್ಕಾರದಿಂದ ಈ ಆವಿಷ್ಕಾರಕ್ಕೆ ಪೇಟೆಂಟ್ ಸಹ ದೊರೆತಿದೆ.

ಇದು ಗರ್ಭಧಾರಣೆಯನ್ನು ಪರೀಕ್ಷಿಸುವ ಕಿಟ್ ಮಾದರಿಯಲ್ಲೇ ಕಾರ್ಯನಿರ್ವಹಿಸುತ್ತದೆ. ಹಾವು ಕಚ್ಚಿದ ವ್ಯಕ್ತಿಯ ರಕ್ತದ ಎರಡೇ ಹನಿಗಳನ್ನು ಈ ಕಿಟ್‌ನಲ್ಲಿ ಹಾಕಿದಾಗ, ಕೇವಲ ಎರಡೇ ನಿಮಿಷಗಳಲ್ಲಿ ಅದು ವಿಷದ ಹಾವೋ ಅಥವಾ ವಿಷರಹಿತ ಹಾವೋ ಎಂಬುದನ್ನು ನಿಖರವಾಗಿ ತಿಳಿಸುತ್ತದೆ. ವಿಷಕಾರಿ ಹಾವಿನ ವಿಷವು ಕಚ್ಚಿದ ಹತ್ತು ನಿಮಿಷಗಳಲ್ಲಿ ಇಡೀ ದೇಹಕ್ಕೆ ಹರಡುತ್ತದೆ. ಹಾಗಾಗಿ, ಹಾವು ಕಚ್ಚಿದ ಕೂಡಲೇ ಆತಂಕಕ್ಕೆ ಒಳಗಾಗುವ ಬದಲು ಈ ಕಿಟ್ ಮೂಲಕ ವಿಷದ ಬಗೆಗೆ ತಿಳಿದು ಕೂಡಲೇ ಆಸ್ಪತ್ರೆಗೆ ಧಾವಿಸುವುದರಿಂದ ಅಮೂಲ್ಯ ಸಮಯವನ್ನು ಉಳಿಸಬಹುದು.

ಹಾವಿನ ವಿಷವನ್ನು ಪತ್ತೆ ಹಚ್ಚುವಂತಹ ಯಾವುದೇ ಸಾಧನವನ್ನು ಜಗತ್ತಿನಲ್ಲಿ ಇದುವರೆಗೆ ಅಭಿವೃದ್ಧಿಪಡಿಸಲಾಗಿಲ್ಲ. ಇದೇ ಮೊದಲ ಬಾರಿಗೆ ನಮ್ಮ ಭಟ್ ಬಯೋಟೆಕ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಇದನ್ನು ಅಭಿವೃದ್ಧಿಪಡಿಸಿದ್ದೇವೆ” ಎಂದು ಮಂಗಳೂರಿನ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ವಿಜ್ಞಾನಿ ಡಾ. ಶ್ಯಾಮ ಭಟ್ ಅವರು ಮಾಹಿತಿ ನೀಡಿದ್ದಾರೆ.

ಮಹಾ ಸರ್ಕಾರದಿಂದ ಬಂದಿದೆ ಕಿಟ್‌ ಆರ್ಡರ್: ಈ ಹಾವಿನ ಔಷಧ ಪೂರೈಕೆಗಾಗಿ ಈಗಾಗಲೇ ಮಹರಾಷ್ಟ್ರ ಸರ್ಕಾರದಿಂದ ಬೇಡಿಕೆ ಬಂದಿದೆ. ಅಲ್ಲದೇ ಅನೇಕ ಸಂಘ ಸಂಸ್ಥೆಗಳೂ ಸಹ ಕೇಳಿವೆ. ಇತ್ತೀಚಿನ ದಿನಗಳಲ್ಲಿ ಹಾವು ಕಡಿತಕ್ಕೆ ಔಷಧಿಯೇ ಇಲ್ಲ ಎನ್ನುವಂತೆ ಆಗಿದೆ. ಆದರೆ ಈ ಕಿಟ್‌ನಿಂದ ಅನೇಕರ ಜೀವ ಉಳಿಸಬಹುದಾಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಬೇಡಿಕೆ ಬರುವುದು ಗ್ಯಾರಂಟಿ.

ಹೀಗೆ ಕೆಲಸ ಮಾಡುತ್ತೆ ಕಿಟ್
* ಇದು ಸ್ನೇಕ್ ವೆನಮ್ ರ‍್ಯಾಪಿಡ್ ಟೆಸ್ಟ್ ಕಿಟ್. ಶ್ಯಾಮ್ ಭಟ್‌ಅವರ ಸಂಶೋಧನೆ
* ಗರ್ಭಧಾರಣೆ ಪರೀಕ್ಷೆ ಮಾಡುವ ಕಿಟ್ ಮಾದರಿಯಲ್ಲೇ ಇದೂ ಕಾರ್ಯನಿರ್ವಹಿಸುತ್ತೆ
* ಮೊದಲು ಹಾವು ಕಚ್ಚಿದ ವ್ಯಕ್ತಿಯ ಎರಡು ಹನಿಯಷ್ಟು ರಕ್ತವನ್ನು ಕಿಟ್‌ನಲ್ಲಿ ಹಾಕಬೇಕು
* 2 ನಿಮಿಷದಲ್ಲಿ ಕಚ್ಚಿದ್ದು ವಿಷದ ಹಾವೋ, ವಿಷ ರಹಿತ ಹಾವೋ ಎಂದು ಪತ್ತೆ
* ಕೇಂದ್ರ ಸರ್ಕಾರದಿಂದ ಈ ಕಿಟ್‌ಗೆ ಈಗಾಗಲೇ ಪೇಟೆಂಟ್ ಕೂಡ ಸಿಕ್ಕಿದೆ

Previous articleಬಾಗೇವಾಡಿ ಪಂಚಾಯತಿ ಬೇಜವಾಬ್ದಾರಿತನ: ಜ್ಞಾನಮಂದಿರದ ದಾರಿಯಲ್ಲಿ ಕಸದ ದುರ್ವಾಸನೆ