Home Advertisement
Home ಸುದ್ದಿ ರಾಜ್ಯ 1ನೇ ತರಗತಿ ವಯೋಮಿತಿಯಲ್ಲಿ 60 ದಿನದ ವಿನಾಯಿತಿ; ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

1ನೇ ತರಗತಿ ವಯೋಮಿತಿಯಲ್ಲಿ 60 ದಿನದ ವಿನಾಯಿತಿ; ರಾಜ್ಯ ಸರ್ಕಾರದಿಂದ ಮಹತ್ವದ ಘೋಷಣೆ

0
16

ಪುಟ್ಟ ಮಕ್ಕಳಿಗೆ ಶಾಲೆಗೆ ಹೋಗುವುದು ಎಂದರೆ ಅಪಾರ ಸಂತೋಷ. ಹೊಸ ಪಠ್ಯಪುಸ್ತಕಗಳು, ಬುತ್ತಿ ಡಬ್ಬಿ ಒಂದು ಕೈಯಲ್ಲಿ ಹಿಡಿದು, ಇನ್ನೊಂದು ಕೈಯಲ್ಲಿ ಅಮ್ಮನ ಕೈ ಹಿಡಿದು ಜ್ಞಾನ ಮಂದಿರದತ್ತ ನಡೆಯುವುದು ಪುಟಾಣಿಗಳಿಗೆ ವಿಶೇಷ ಅನುಭವ. ಮಕ್ಕಳ ಶೈಕ್ಷಣಿಕ ಪಯಣ ಸಾಮಾನ್ಯವಾಗಿ LKG (ಕೆಳ ಶಿಶುವಿಹಾರ), ನಂತರ UKG (ಮೇಲಿನ ಶಿಶುವಿಹಾರ) ಮೂಲಕ ಆರಂಭವಾಗಿ, ಬಳಿಕ 1ನೇ ತರಗತಿಗೆ ಪ್ರವೇಶ ಪಡೆಯುತ್ತಾರೆ.

ಇದುವರೆಗೆ 1ನೇ ತರಗತಿಗೆ ಸೇರ್ಪಡೆಯಾಗಲು 6 ವರ್ಷ ವಯಸ್ಸು ಕಡ್ಡಾಯವಾಗಿತ್ತು. ಆದರೆ ಇದೀಗ ರಾಜ್ಯ ಸರ್ಕಾರ ಮಹತ್ವದ ಬದಲಾವಣೆಯನ್ನು ಘೋಷಿಸಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ತಿಳಿಸಿದಂತೆ, ಪೋಷಕರ ಮನವಿಯನ್ನು ಪರಿಗಣಿಸಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಹೊಸ ನಿಯಮದ ಪ್ರಕಾರ, 6 ವರ್ಷ ಪೂರೈಸಿದ ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತಿತ್ತು,ಇದರಿಂದಾಗಿ ವಯಸ್ಸಿನ ಅಂತರದ ಕಾರಣದಿಂದ ಪ್ರವೇಶ ತಪ್ಪುತ್ತಿದ್ದ ಮಕ್ಕಳಿಗೂ ಅವಕಾಶ ಸಿಗಲಿದೆ. ಜೊತೆಗೆ, 5 ವರ್ಷ 10 ತಿಂಗಳು ವಯಸ್ಸಿನಲ್ಲಿಯೇ ಮಕ್ಕಳನ್ನು ಶಾಲೆಗೆ ಸೇರಿಸಲು ಸಹ ಅವಕಾಶ ಕಲ್ಪಿಸಲಾಗಿದೆ.

ಈ ಬದಲಾವಣೆಯನ್ನು ಜಾರಿಗೆ ತರಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಶಾಲಾ ದಾಖಲಾತಿ ಪ್ರಕ್ರಿಯೆಯಲ್ಲಿ ಬಳಸುವ ತಂತ್ರಾಂಶದಲ್ಲಿಯೂ ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದನದಲ್ಲಿ ನಡೆದ ಚರ್ಚೆಯ ವೇಳೆ LKG ಮತ್ತು UKG ದಾಖಲಾತಿಯಲ್ಲಿ ಪೋಷಕರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಪ್ರಸ್ತಾಪಿಸಲಾಯಿತು. ಈ ಸಮಸ್ಯೆಗಳನ್ನು ಪರಿಹರಿಸಲು ಕೂಡ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಗಿದೆ.

ಶಾಸಕ ಅರವಿಂದ್ ಬೆಲ್ಲದ್ ಅವರು ಈ ಸಡಿಲಿಕೆಯನ್ನು ಕಾನೂನಾತ್ಮಕವಾಗಿ ಜಾರಿಗೊಳಿಸುವಂತೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಸಚಿವರು, ಇಲಾಖೆಯಿಂದ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ. ಈ ನಿರ್ಧಾರದಿಂದಾಗಿ, ಮಕ್ಕಳ ಶಾಲಾ ಪ್ರವೇಶದಲ್ಲಿ ಉಂಟಾಗುತ್ತಿದ್ದ ವಯೋಮಿತಿ ಸಂಬಂಧಿತ ತೊಂದರೆಗಳಿಗೆ ಪರಿಹಾರ ದೊರೆಯಲಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದು ಒಂದು ಮಹತ್ವದ ಬದಲಾವಣೆ ಎಂದು ಪರಿಗಣಿಸಲಾಗಿದೆ.