Home Advertisement
Home ಸುದ್ದಿ ರಾಜ್ಯ ಮೂರು ವರ್ಷದಲ್ಲಿ 349 ಲೈಂಗಿಕ ಕಿರುಕುಳ ಪ್ರಕರಣ

ಮೂರು ವರ್ಷದಲ್ಲಿ 349 ಲೈಂಗಿಕ ಕಿರುಕುಳ ಪ್ರಕರಣ

0
69

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರ ರಕ್ಷಣೆಗಾಗಿ ಸಾಕಷ್ಟು ಕಾನೂನುಗಳಿದ್ದರೂ ಸಹ ಸ್ತ್ರೀಯರ ಮೇಲಾಗುತ್ತಿರುವ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ. ಈ ಕುರಿತಂತೆ ರಾಜ್ಯ ಮಹಿಳಾ ಆಯೋಗದಲ್ಲಿ ಕಳೆದ ಮೂರು ವರ್ಷಗಳಲ್ಲಿ 349 ದೂರುಗಳು ದಾಖಲಾಗಿರುವುದೇ ನಿದರ್ಶನವಾಗಿದೆ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಏಪ್ರಿಲ್ 2025ರಿಂದ ಜನವರಿ 2026ರವರೆಗೆ 123 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 51 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಇನ್ನು 72 ಪ್ರಕರಣಗಳು ವಿಚಾರಣೆ ಚಾಲ್ತಿಯಲ್ಲಿದೆ.

ಕೆಲವು ಪ್ರಕರಣಗಳು ಕೇಸು ದಾಖಲಿಸುವ ಹಂತಕ್ಕೆ ಬರುತ್ತವೆ. ಆದರೆ ಬಹುತೇಕ ಪ್ರಕರಣಗಳು ವರದಿಯಾಗದೆ ಅಂತ್ಯ ಕಾಣುತ್ತಿರುವುದು ಕೂಡಾ ಆತಂಕಕಾರಿ ಬೆಳವಣಿಗೆಯಾಗಿದೆ. ಕೌಟುಂಬಿಕವಾಗಿಯೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು, 2026ರಲ್ಲಿ ಈ ಕುರಿತು ರಾಜ್ಯ ಮಹಿಳಾ ಆಯೋಗದಲ್ಲಿ 668 ದೂರು ಸ್ವೀಕೃತಗೊಂಡಿವೆ. ಈ ಪೈಕಿ 472 ಪ್ರಕರಣ ಮುಕ್ತಾಯ ಕಂಡಿವೆ. ಇನ್ನುಳಿದ 196 ಪ್ರಕರಣಗಳು ವಿವಿಧ ಹಂತದಲ್ಲಿವೆ.

1997ರಲ್ಲಿ ಸುಪ್ರೀಂ ಕೋರ್ಟ್, `ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳವನ್ನು ತಡೆಯಲು ಕೆಲವು ನಿಯಮಗಳನ್ನು ರೂಪಿಸಿದೆ. ಲೈಂಗಿಕ ಕಿರುಕುಳದ ವ್ಯಾಖ್ಯಾನ, ತಡೆಗಟ್ಟುವ ಕ್ರಮಗಳು, ದೂರು ಸಮಿತಿಯ ರಚನೆ ಮತ್ತು ಸಂತ್ರಸ್ತರಿಗೆ ರಕ್ಷಣೆ ಒದಗಿಸುವ ಕಾರ್ಯವಿಧಾನಗಳನ್ನು ಒಳಗೊಂಡಿವೆ. ಇದರ ಪ್ರಕಾರ, ದೈಹಿಕ ಸಂಪರ್ಕ, ಲೈಂಗಿಕವಾಗಿ ಬೇಡಿಕೆ ಇಡುವುದು, ಅಶ್ಲೀಲ ಚಿತ್ರಗಳನ್ನು ತೋರಿಸುವುದು ಅಪರಾಧವಾಗಿದೆ. ಮಹಿಳೆಯರು ಕೆಲಸ ಮಾಡುವ ಸ್ಥಳದಲ್ಲಿ ಲೈಂಗಿಕ ಕಿರುಕುಳವನ್ನು ತಡೆಯುವುದು ಮತ್ತು ಸುರಕ್ಷಿತ ವಾತಾವರಣವನ್ನು ಕಲ್ಪಿಸುವುದು ಸಂಸ್ಥೆಯ ಮಾಲೀಕರ ಜವಾಬ್ದಾರಿಯಾಗಿದೆ. ಕಾನೂನುಗಳು ಬಲಿಷ್ಠವಾಗಿದ್ದರೂ ಸಹ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯಗಳ ಸಂಖ್ಯೆ ತಗ್ಗಿಲ್ಲ.