ಹಾವೇರಿ: ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸುತ್ತಿದ್ದ ಯುವಕನೊಬ್ಬ ಮದುವೆ ಆಗಲು ನಿರಾಕರಿಸಿದ ಯುವತಿಯನ್ನು ಕಾರಿನಲ್ಲಿ ಬಂದು ಹಾವೇರಿಯಲ್ಲಿ ಅಪಹರಣ ಮಾಡಿಕೊಂಡು ಹೋಗಿ ಮೊಟೆಬೆನ್ನೂರ ಬಳಿ ಬಿಟ್ಟು ಹೋದ ಘಟನೆ ರವಿವಾರ ನಡೆದಿದೆ.
ನಗರದ ವಿಜಯಲಕ್ಷ್ಮೀ (೨೩) ಅಪಹರಣಕ್ಕೆ ಒಳಗಾದ ಯುವತಿ.
ಈಕೆಗೆ ಪರಿಚಯವಿದ್ದ ವಿಷ್ಣು (೨೫) ಹಾಗೂ ಈತನ ಇಬ್ಬರು ಸ್ನೇಹಿತರು ಸೇರಿ ಅಪಹರಣ ಮಾಡಿರುವ ಆರೋಪಿಗಳು.
ವಿಷ್ಣು ವಿಜಯಲಕ್ಷ್ಮೀಯನ್ನು ಮದುವೆ ಮಾಡಿಕೊಳ್ಳುವೆ ಎಂದು ಕಳೆದ ಹಲವು ದಿನಗಳಿಂದ ಪೀಡಿಸುತ್ತಿದ್ದ. ಇದಕ್ಕೆ ವಿಜಯಲಕ್ಷ್ಮೀ ವಿರೋಧ ವ್ಯಕ್ತಪಡಿಸಿದ್ದಳು. ಇದರಿಂದಾಗಿ ಕೋಪಗೊಂಡ ವಿಷ್ಣು ರವಿವಾರ ಬೆಳಗ್ಗೆ ವಿಜಯಲಕ್ಷ್ಮೀ ತನ್ನ ಸ್ನೇಹಿತೆಯರೊಂದಿಗೆ ತೆರಳುತ್ತಿದ್ದ ಸಮಯದಲ್ಲಿ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದಾನೆ.
ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.