ಬೆಂಗಳೂರು: ಭಾರತದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ಮಾಡಲಾದ ಚಂದ್ರಯಾನ-3 ಉಡಾವಣೆಗೊಂಡು ಇಂದಿಗೆ ಎರಡು ವರ್ಷಗಳು ಸಂದಿವೆ.
ಇಸ್ರೋದಿಂದ ಉಡಾವಣೆಗೊಂಡಿದ್ದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದ ಸಮೀಪ ಯಶಸ್ವಿಯಾಗಿ ಇಳಿದಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 2023 ಜುಲೈ 14ರಂದು ಚಂದ್ರಯಾನ-3 ಉಡಾವಣೆ ಮಾಡಲಾಯಿತು. GSLV ಮಾರ್ಕ್ 3 (LVM 3) ಭಾರೀ ಉಡಾವಣಾ ವಾಹನವನ್ನು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಕಕ್ಷೆಗೆ ಉಡಾಯಿಸಲು ಬಳಸಲಾಯಿತು.
ಚಂದ್ರಯಾನ-3ರ ಸಂಯೋಜಿತ ಘಟಕ. ಸಿಲಿಂಡರ್ ಆಕಾರದ ಆರ್ಬಿಟರ್, ಅದರ ಮೇಲೆ ವಿಕ್ರಮ್ ಲ್ಯಾಂಡರ್ ಇದೆ. ಇದು ಆಗಸ್ಟ್ 23, 2023ರಂದು ಚಂದ್ರನ ದಕ್ಷಿಣ ಧ್ರುವಕ್ಕೆ ತಲುಪಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಿದ ಭಾರತ ಮೊಟ್ಟಮೊದಲ ದೇಶವಾಯಿತು. ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಚಂದ್ರಯಾನ 3 ಇಳಿದ ಪ್ರದೇಶವನ್ನು ʼಶಿವಶಕ್ತಿ’ ಎಂದು ನಾಮಕರಣ ಮಾಡಿ ಮಾತನಾಡಿ, ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯಲಾಗುವುದು. ‘ಶಕ್ತಿ’ ‘ ಶಿವಶಕ್ತಿ’ ಮಹಿಳಾ ವಿಜ್ಞಾನಿಗಳ ಕಠಿಣ ಪರಿಶ್ರಮ, ಸ್ಫೂರ್ತಿ ಮತ್ತು ಸಬಲೀಕರಣ ಎಂದು ಅವರು ಹೇಳಿದ್ದರು.
ಶಿವನಲ್ಲಿ ಮಾನವೀಯತೆ ಕಲ್ಯಾಣದ ಸಂಕಲ್ಪ ಬೆರೆತುಕೊಂಡಿದೆ. ‘ಶಿವಶಕ್ತಿʼಯಲ್ಲಿ ಆ ಸಂಕಲ್ಪವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಸಿಗಲಿದೆ. ವಿಜ್ಞಾನದ ಉಪಯೋಗವನ್ನು ಮಾನವತೆಯ ಕಲ್ಯಾಣಕ್ಕಾಗಿಯೇ ಮಾಡಬೇಕಿದೆ. ಮಾನವತೆಯ ಕಲ್ಯಾಣ ನಮ್ಮ ಸರ್ವೋಚ್ಚ ಬದ್ಧತೆ ಎಂದು ನರೇಂದ್ರ ಮೋದಿ ಹೇಳಿದ್ದರು. ಚಂದ್ರಯಾನ-3 ಲ್ಯಾಂಡಿಂಗ್ ಸೈಟ್ ಅನ್ನು ʼಶಿವ ಶಕ್ತಿ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಸುಮಾರು ಏಳು ತಿಂಗಳ ನಂತರ, ಅಂತಾರಾಷ್ಟ್ರೀಯ ಖಗೋಳ ಒಕ್ಕೂಟ (IAU) 2024, ಮಾರ್ಚ್ 19ರಂದು ಈ ಹೆಸರನ್ನು ಅನುಮೋದಿಸಿತ್ತು.
ಇದಕ್ಕೂ ಮುನ್ನ 2019ರಲ್ಲಿ ಚಂದ್ರಯಾನ-2 ಪತನಗೊಂಡ ಚಂದ್ರನ ಸ್ಥಳವನ್ನು ‘ತಿರಂಗ ಪಾಯಿಂಟ್’ ಎಂದು ಹೆಸರಿಸಲಾಯಿತು. ಚಂದ್ರಯಾನ-3ರ ಆಗಸ್ಟ್ 23ರಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡಿಂಗ್ ಮಾಡಿತು ಅಂದಿನ ದಿನವನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನಾಗಿ ಆಚರಿಸಲಾಗುತ್ತಿದೆ. ಇದು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಂಭ್ರಮಿಸುವ ದಿನವಾಗಲಿದೆ ಹಾಗೂ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ.
ನಾಸಾ ಮತ್ತು ಸಿಎನ್ಎಸ್ಎ ನಂತರ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ನಾಲ್ಕನೇ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿ ಇಸ್ರೋ ಗುರುತಿಸಿಕೊಂಡಿತ್ತು. ಅದೇ ರೀತಿ ಚಂದ್ರನ ದಕ್ಷಿಣ ಧ್ರುವದ ಬಳಿ ಮೃದುವಾದ ಲ್ಯಾಂಡಿಂಗ್ ಸಾಧಿಸಿದ ಮೊದಲ ರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆಯಾಗಿದೆ.