ವೆನೆಜುವೆಲಾ ಅಧ್ಯಕ್ಷ, ಪತ್ನಿಯನ್ನೇ ಹೊತ್ತೊಯ್ದ ಅಮೆರಿಕ ಸೈನಿಕರು!

0
1

ವಾಷಿಂಗ್ಟನ್: ವೆನೆಜುವೆಲಾ ಮೇಲೆ ಶನಿವಾರ ಮುಂಜಾನೆ ಅಮೆರಿಕದ ಮಿಲಿಟರಿ ಪಡೆಗಳು ವೈಮಾನಿಕ ದಾಳಿ ನಡೆಸುವ ಮೂಲಕ ಆಕ್ರಮಣ ನಡೆಸಿದ್ದು, ಆ ದೇಶದ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕ ಸೈನಿಕರು ಸೆರೆಹಿಡಿದು ದೇಶದ ಹೊರಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಖುದ್ದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಘೋಷಿಸಿದ್ದಾರೆ.

ಅವರಿಬ್ಬರೂ ಜೀವಂತ ಇರುವ ಬಗ್ಗೆ ಪುರಾವೆ ಒದಗಿಸಿ ಎಂದು ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್ ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಟ್ರಂಪ್ ಇಬ್ಬರಿಗೂ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ನಿಗೂಢ ಸ್ಥಳದಲ್ಲಿ ಇಟ್ಟಿರುವ ಫೋಟೋವನ್ನು ಬಿಡುಗಡೆ ಮಾಡಿದರು. ಇದೇ ವೇಳೆ ವಿಶ್ವಸಂಸ್ಥೆಯ ಮಧ್ಯಸ್ಥಿಕೆಗೆ ಒತ್ತಾಯಿಸಿರುವ ವೆನೆಜುವೆಲಾ ಸರ್ಕಾರ, ಕೂಡಲೇ ಭದ್ರತಾ ಮಂಡಳಿಯ ಸಭೆ ಕರೆಯಬೇಕೆಂದೂ ಪಟ್ಟು ಹಿಡಿದಿದೆ.

ಅಮೆರಿಕ ಮಾಧ್ಯಮಗಳ ಪ್ರಕಾರ, ವೆನೆಜುವೆಲಾ ವಿರುದ್ಧ ನಡೆದಿರುವ ಸರಣಿ ದಾಳಿಗಳ ಹಿಂದೆ ಅಮೆರಿಕ ಮಿಲಿಟರಿ ಕೈವಾಡವಿದೆ. ಅಲ್ಲದೆ, ಅಮೆರಿಕದ ಕೆಲವು ಅಧಿಕಾರಿಗಳೂ ತಮ್ಮ ದೇಶದ ಮಿಲಿಟರಿ ಪಡೆಗಳು ಈ ದಾಳಿಯಲ್ಲಿ ಭಾಗಿಯಾಗಿರುವುದನ್ನೂ ದೃಢಪಡಿಸಿದ್ದಾರೆ.

ದಾಳಿಯ ಹಿನ್ನೆಲೆ: ವೆನೆಜುವೆಲಾದಿಂದ ಅಮೆರಿಕಕ್ಕೆ ಮಾದಕದ್ರವ್ಯ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎಂಬುದು ಅಮೆರಿಕ ಅಧ್ಯಕ್ಷ ಟ್ರಂಪ್ ಆರೋಪ. ಈ ದೇಶದ ಅಧ್ಯಕ್ಷ ನಿಕೋಲಸ್ ಮಾದಕ ದ್ರವ್ಯ ಕಳ್ಳಸಾಗಾಟ ಜಾಲದ ಮುಖ್ಯಸ್ಥನೆಂದೇ ಟ್ರಂಪ್ ಜರೆಯುತ್ತಿದ್ದಾರೆ. ಆದರೆ ವೆನೆಜುವೆಲಾವು ಜಗತ್ತಿನಲ್ಲೇ ಅತಿ ದೊಡ್ಡದಾದ ತೈಲ ನಿಕ್ಷೇಪ ಹೊಂದಿರುವುದು ಅಮೆರಿಕ ಅಧ್ಯಕ್ಷರ ಕೆಂಗಣ್ಣಿಗೆ ಕಾರಣವಾಗಿದೆ.

ಕಳೆದ ಸೆಪ್ಟೆಂಬರ್‌ನಿಂದ ಕೆರಿಬಿಯನ್ ಸಮುದ್ರ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದಲ್ಲಿ ದೋಣಿಗಳ ಮೇಲೆ ಅಮೆರಿಕ ಮಿಲಿಟರಿ ಪಡೆಗಳು ಹಲವಾರು ದಾಳಿಗಳನ್ನು ನಡೆಸಿವೆ. ಈ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು ತೈಲ ದಿಗ್ಬಂಧನದ ಭಾಗವಾಗಿ ವೆನೆಜುವೆಲಾದ ಎರಡು ಟ್ಯಾಂಕರ್‌ಗಳನ್ನೂ ವಶಪಡಿಸಿಕೊಳ್ಳಲಾಗಿತ್ತು.

ಕೆರಿಬಿಯನ್ ಸಮುದ್ರದಲ್ಲಿ ಅತ್ಯಂತ ಅತ್ಯಾಧುನಿಕ ವಿಮಾನವಾಹಕ ನೌಕೆ ಯುಎಸ್‌ಎಸ್ ಜೆರಾಲ್ಡ್ ಆರ್ ಫೋರ್ಡ್ ಮತ್ತು ಇತರ ಯುದ್ಧನೌಕೆಗಳನ್ನು ಒಳಗೊಂಡಂತೆ ಅನೇಕ ಅತಿದೊಡ್ಡ ಸಮರನೌಕೆ ಮತ್ತು ಸಮರ ವಿಮಾನಗಳನ್ನೂ ಅಮೆರಿಕ ಮಿಲಿಟರಿ ಪಡೆ ನಿಯೋಜಿಸಿತ್ತು.

Previous articleಸಿಎಂಗೆ ಬಳ್ಳಾರಿ ಘಟನೆ ವಿವರಿಸಿದ ಭರತ್ ರೆಡ್ಡಿ, ಸಚಿವ ಜಮೀರ್