ಟೊರಂಟೊ (ಕೆನಡಾ): ಕೆನಡಾದ ಟೊರಂಟೊ ನಗರದಲ್ಲಿ ಕಳೆದ ತಿಂಗಳು ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಕನ್ನಡಿಗ ಚಂದನ್ ಕುಮಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಅಪ್‌ಡೇಟ್ ನೀಡಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಭಾವಚಿತ್ರಗಳನ್ನು ಟೊರಂಟೊ ಪೊಲೀಸರು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ನಿವಾಸಿಯಾಗಿದ್ದ ಚಂದನ್ ಕುಮಾರ್ ಕಳೆದ ಆರು ವರ್ಷಗಳಿಂದ ಕೆನಾಡದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅಲ್ಲಿನ ಕನ್ನಡಿಗರ ಸಂಘಟನೆಯ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಅವರು ಉತ್ತಮ ಹೆಸರು ಗಳಿಸಿದ್ದರು.
ಗುಂಡಿನ ದಾಳಿ ಮಾಡಿ ಪರಾರಿಯಾಗಿದ್ದ ಆರೋಪಿಗಳು: ಕಳೆದ ತಿಂಗಳು ಟೊರಂಟೊ ನಗರದಲ್ಲಿ ಚಂದನ್ ಮೇಲೆ ಗುಂಡಿನ ದಾಳಿ ನಡೆಸಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಪ್ರಥಮ ಹಂತದ ಕೊಲೆ ಆರೋಪದ ಮೇಲೆ 19 ವರ್ಷದ ಇಬ್ಬರು ಯುವಕರ ವಿರುದ್ಧ ಕೆನಡಾದಾದ್ಯಂತ ಬಂಧನ ವಾರಂಟ್ ಜಾರಿಗೊಳಿಸಿದ್ದಾರೆ.
‘ವಾಂಟೆಡ್’ ಪಟ್ಟಿ ಬಿಡುಗಡೆ: ಟೊರಂಟೊ ಪೊಲೀಸರು ಪ್ರೆಸ್ ಮೀಟ್ ನಡೆಸಿ, ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಸಾರ್ವಜನಿಕರು ಆರೋಪಿಗಳ ಬಗ್ಗೆ ಯಾವುದೇ ಮಾಹಿತಿ ಹೊಂದಿದ್ದರೆ ತಕ್ಷಣ ಪೊಲೀಸರಿಗೆ ತಿಳಿಸುವಂತೆ ಮನವಿ ಮಾಡಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಚಂದನ್ ಕುಮಾರ್ ಅವರ ನಿಧನದಿಂದ ಕುಟುಂಬದವರಲ್ಲೂ ಹಾಗೂ ಕೆನಡಾದ ಕನ್ನಡಿಗ ಸಮುದಾಯದಲ್ಲೂ ತೀವ್ರ ಆಘಾತ ಉಂಟಾಗಿದೆ.





















