ಬ್ಯಾಂಕಾಕ್: ಥೈಲ್ಯಾಂಡ್‌ನಲ್ಲಿ ಕಳೆದೊಂದು ವಾರದಲ್ಲಿ ಸುರಿದ ದಾಖಲೆ ಮಳೆ ಹಾಗೂ ಪ್ರವಾಹದಿಂದಾಗಿ ಕನಿಷ್ಟ 33 ಮಂದಿ ಮೃತಪಟ್ಟಿದ್ದು ಸುಮಾರು ಇಪ್ಪತ್ತು ಲಕ್ಷ ಜನರು ತೊಂದರೆಗೀಡಾಗಿದ್ದಾರೆ. ಇವರ ಪೈಕಿ 13 ಸಾವಿರ ಮಂದಿ ಮಾತ್ರ ತಾತ್ಕಾಲಿಕ ಆಶ್ರಯತಾಣಗಳಿಗೆ ಸ್ಥಳಾಂತರಗೊಂಡಿದ್ದಾರೆ. 10 ಪ್ರಾಂತ್ಯಗಳಲ್ಲಿ ಎಡಬಿಡದೇ ನಿರಂತರ ಮಳೆ ಸುರಿದು ಪ್ರವಾಹ ಉಂಟಾಗಿರುವುದರಿಂದ ನಾನಾ ರೀತಿಯ ಅನಾಹುತಗಳು ಸಂಭವಿಸಿವೆ.
ಮಲೇಷ್ಯಾದ ಗಡಿಭಾಗದಲ್ಲಿರುವ ಹಾಟ್ ಯೇ ಎನ್ನುವ ಥೈಲ್ಯಾಂಡಿನ ವ್ಯಾಪಾರ ಕೇಂದ್ರದಲ್ಲಿ ಒಂದೇ ದಿನ 335 ಮಿಲಿಮೀಟರ್‌ಗಳಷ್ಟು ಮಳೆ ಸುರಿದಿದೆ. ಇದು 3 ಶತಮಾನಗಳಲ್ಲೇ ದಾಖಲೆ ಮಳೆ ಪ್ರಮಾಣವಾಗಿದೆ.
ಮಾಧ್ಯಮಗಳ ದೃಶ್ಯಾವಳಿಯಂತೆ ಹಾಟ್ ಯೇ ನಗರದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಜನರು ಮನೆಗಳ ಛಾವಣಿ ಏರಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಹಲವಡೆ ಮನೆಗಳು ಹಾಗೂ ವಾಹನಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಅವಿರತವಾಗಿ ಸುರಿಯುವ ಮಳೆಯಿಂದ ನೆರೆಯ ದೇಶಗಳಲ್ಲೂ ಅನಾಹುತಗಳು ಸಂಭವಿಸಿವೆ. ವಿಯೆಟ್ನಾಂನಲ್ಲಿ ಕಳೆದೊಂದು ವಾರದಲ್ಲಿ ಸಾವಿಗೀಡಾದವರ ಸಂಖ್ಯೆ 98ಕ್ಕೇರಿದರೆ ಮಲೇಷ್ಯಾದಲ್ಲಿ 19 ಸಾವಿರಕ್ಕೂ ಹೆಚ್ಚು ಜನರು ತಂತಮ್ಮ ಮನೆಗಳನ್ನು ತೊರೆದು ಸುರಕ್ಷಿತ ತಾಣಗಳಲ್ಲಿ ಆಶ್ರಯ ಪಡೆದಿದ್ದಾರೆ. ಇಂಡೋನೇಷಿಯಾದಲ್ಲಿ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ.

























