ಆಸ್ತಿ ಹಣ ವೆನೆಜುವೆಲನ್ನರಿಗೆ ಸಿಗುವಂತೆ ಮಾಡ್ತೇವೆ: ಸ್ವಿಸ್ ಸರ್ಕಾರ
ಸ್ವಿಟ್ಜರ್ಲೇಂಡ್: ನಾರ್ಕೋ ಟೆರರಿಸಂ ಆರೋಪದ ಮೇಲೆ ವೆನಿಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೋ ಅವರನ್ನು ಅಮೆರಿಕ ಸೆರೆಹಿಡಿದ ಬೆನ್ನಲ್ಲೇ ಮಡರೋ ಮತ್ತು ಅವರ ಸಹಚರರ ಆಸ್ತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಸ್ವಿಸ್ ಸರ್ಕಾರ ಸೋಮವಾರ ಹೇಳಿದೆ. ಕಾರಾಕಸ್ ಮೇಲೆ ಅಮೆರಿಕ ಮಿಲಿಟರಿ ಕಾರ್ಯಾಚರಣೆ ನಡೆಸಿ ಮಡುರೋ ಅವರನ್ನು ನ್ಯೂಯಾರ್ಕ್ಗೆ ಹೊತ್ತೋಯ್ದ ಬೆನ್ನಲ್ಲೇ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಇಂತಹ ಅಸ್ಥಿರ ಪರಿಸ್ಥಿತಿಯಲ್ಲಿ ಯಾವುದೇ ಅಕ್ರಮ ಆಸ್ತಿ ಸ್ವಿಟ್ಜರ್ಲೇಂಡಿಂದ ಹೊರಹೋಗದಂತೆ ತಡೆಯುವ ನಿಟ್ಟಿನಲ್ಲಿ ಸ್ವಿಟ್ಜರ್ಲೇಂಡ್ ಫೆಡರಲ್ ಕಾನೂನು ಅಡಿಯಲ್ಲಿ ಮಡುರೋ ಮತ್ತವರ ಸಹಚರರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಆದೇಶ ತಕ್ಷದಿಂದಲೇ ಜಾರಿಗೆ ಬರಲಿದ್ದು, ಮುಂದಿನ ನಾಲ್ಕು ವರ್ಷಗಳವರೆಗೂ ಅಸ್ತಿತ್ವದಲ್ಲಿರುತ್ತದೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ವೆನಿಜುವಾಲದ ಮೇಲೆ ಪರಿಣಾಮ ಬೀರಲ್ಲ – ಸ್ವಿಸ್: ವೆನಿಜುವಾಲದಿಂದ ಮಡುರೋ ಅಧಿಕಾರ ಕಳೆದುಕೊಂಡು ಎಂಬ ಮಾತ್ರಕ್ಕೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿಲ್ಲ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ವೆನಿಜುವೆಲಾ ಸರ್ಕಾರದ ಯಾವುದೇ ವ್ಯಕ್ತಿಯ ಮೇಲೆ ಪರಿಣಾಮ ಬೀರುವುದಿಲ್ಲ. ಅಕ್ರಮ ಆಸ್ತಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಕಾನೂನು ಪ್ರಕ್ರಿಯೆ ನಡೆಸಲಾಗುತ್ತದೆ. ಆ ಬಳಿಕ ವೆನಿಜುವೆಲಾ ಜನತೆಗೆ ಆಸ್ತಿ ಲಾಭವಾಗುಂತೆ ಸ್ವಿಸ್ ಸರ್ಕಾರ ನೋಡಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ. ಇದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒತ್ತಡವೂ ಕಾರಣ ಎಂದು ಹೇಳಲಾಗುತ್ತಿದೆ. ಆದರೆ ಇದನ್ನು ಸ್ವಿಜ್ ಸರ್ಕಾರ ತಳ್ಳಿಹಾಕಿದೆ.
ಉಪಾಧ್ಯಕ್ಷೆಯೇ ಈಗ ವೆನೆಜುವೆಲಾದ ಅಧ್ಯಕ್ಷೆ: ನಿಕೋಲಸ್ ಮಡುರೋ ಅಧಿಕಾರ ಕಳೆದುಕೊಂಡ ನಂತರ ವೆನೆಜುವೆಲಾದ ನೂತನ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ಅವರು ರಾಷ್ಟ್ರೀಯ ಅಸೆಂಬ್ಲಿ ಸಭೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದುವರೆಗೆ ಅವರು ಮಡುರೋ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮಡುರೋ ಅಮೆರಿಕದ ಕೈವಶವಾದ ನಂತರ ಈ ದೇಶದ ಸುಪ್ರೀಂಕೋರ್ಟ್ ಡೆಲ್ಸಿ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿತ್ತು. ಏತನ್ಮಧ್ಯೆ ವೆನೆಜುವೆಲಾ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿರುವ ಡೆಲ್ಸಿ ಅವರು ಅಮೆರಿಕದ ಜೊತೆ ಸಹಕರಿಸದಿದ್ದರೆ ಮಡುರೋ ಎದುರಿಸಿದ್ದಕ್ಕಿಂತಲೂ ಹೀನಾಯ ಪರಿಸ್ಥಿತಿ ಎದುರಿಸಬೇಕಾದೀತು ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ನಾನೇ ಈಗ್ಲೂ ಅಧ್ಯಕ್ಷ, ನನ್ನ ಅಪಹರಿಸಿದ್ದಾರೆ: ನ್ಯೂಯಾರ್ಕ್ ಕೋರ್ಟಲ್ಲಿ ನಿಕೋಲಸ್ ವಿಚಾರಣೆ ಶುರುವಾಗಿದ್ದು, ಈ ಸಂದರ್ಭದಲ್ಲಿ ನಾನೇ ಈಗಲೂ ವೆನೆಜುವೆಲಾ ಅಧ್ಯಕ್ಷ ನನ್ನನ್ನು ಅಪಹರಣ ಮಾಡಲಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ. 40 ನಿಮಿಷಗಳ ವಿಚಾರಣೆ ಸಂದರ್ಭದಲ್ಲಿ ಪದ್ಧತಿಯಂತೆ, ನೀವೇ ನಿಕೋಲಸ್ ಮಡುರೋ ಎನ್ನುವುದನ್ನು ಖಚಿತಪಡಿಸಿ ಎಂದು ನ್ಯಾಯಾಧೀಶರು ಕೇಳಿದರು. ಈ ಅವಕಾಶವನ್ನು ಬಳಸಿಕೊಂಡ ನಿಕೋಲಸ್ ವೆನೆಜುವೆಲಾದ ಕಾರಾಕಸ್‌ನ ನನ್ನ ಮನೆಯಿಂದ ಅಪಹರಣ ಮಾಡಲಾಗಿದೆ ಎಂದು ಸ್ಪಾö್ಯನಿಶ್ ಭಾಷೆಯಲ್ಲಿ ವಿವರಿಸಿದರು. ಆಗ ಈ ವಿಷಯಗಳನ್ನು ತಿಳಿಸಲು ಬೇರೆ ಸಮಯ ಇದೆ ಎಂದು ಅವರ ಮಾತನ್ನು ತುಂಡರಿಸಿದರು. ಒಳಗೆ ವಿಚಾರಣೆ ನಡೆಯುತ್ತಿದ್ದರೆ, ಹೊರಗೆ ನಿಕೋಲಸ್ ಬಂಧನ ವಿರೋಧಿಸಿ ಪ್ರತಿಭಟನೆ ನಡೆಯುತ್ತಿತ್ತು.









