50 ವರ್ಷಗಳ ಬಳಿಕ ಟೆಕ್ಸಾಸ್‌ನಲ್ಲಿ ಹೊಸ ರಿಫೈನರಿ: ರಿಲಯನ್ಸ್ ಜೊತೆ ಐತಿಹಾಸಿಕ ಒಪ್ಪಂದ ಎಂದ ಟ್ರಂಪ್
ವಾಷಿಂಗ್ಟನ್: ಭಾರತದ ಪ್ರಮುಖ ಎನರ್ಜಿ ಮತ್ತು ಪೆಟ್ರೋಕೆಮಿಕಲ್ ಕಂಪನಿಯಾದ ರಿಲಯನ್ಸ್ ಇಂಡಸ್ಟ್ರೀಸ್ (Reliance Industries) ಅಮೆರಿಕದಲ್ಲಿ ನಿರ್ಮಾಣವಾಗಲಿರುವ ಭಾರೀ ತೈಲ ಸಂಸ್ಕರಣಾ ಘಟಕಕ್ಕೆ ಹೂಡಿಕೆ ಮಾಡಲು ಮುಂದಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಘೋಷಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಟ್ರೂತ್ ಸೋಷಿಯಲ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದು ಅಮೆರಿಕದ Texas ರಾಜ್ಯದ Brownsville ಪ್ರದೇಶದಲ್ಲಿ ಸುಮಾರು 300 ಬಿಲಿಯನ್ ಡಾಲರ್ (ಸುಮಾರು ₹27.56 ಲಕ್ಷ ಕೋಟಿ) ವೆಚ್ಚದಲ್ಲಿ ಹೊಸ ತೈಲ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
50 ವರ್ಷಗಳ ಬಳಿಕ ಹೊಸ ರಿಫೈನರಿ : ಟ್ರಂಪ್ ಹೇಳುವಂತೆ, ಕಳೆದ ಸುಮಾರು 50 ವರ್ಷಗಳ ನಂತರ ಅಮೆರಿಕದಲ್ಲಿ ಹೊಸ ತೈಲ ಸಂಸ್ಕರಣಾ ಘಟಕವನ್ನು ನಿರ್ಮಿಸುವ ಮಹತ್ವದ ಯೋಜನೆ ಇದಾಗಿದೆ. ಅಮೆರಿಕದ ಇತಿಹಾಸದಲ್ಲಿಯೇ ಇದು ಅತ್ಯಂತ ದೊಡ್ಡ ಇಂಧನ ಹೂಡಿಕೆಗಳಲ್ಲಿ ಒಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಅಮೆರಿಕನ್ ಕಾರ್ಮಿಕರಿಗೆ ಲಾಭ: ಈ ಯೋಜನೆ ಅಮೆರಿಕದ ಕಾರ್ಮಿಕರು, ಇಂಧನ ಕ್ಷೇತ್ರ ಹಾಗೂ ದಕ್ಷಿಣ ಟೆಕ್ಸಾಸ್ ಪ್ರದೇಶದ ಅಭಿವೃದ್ಧಿಗೆ ಮಹತ್ತರವಾಗಿ ಸಹಕಾರಿಯಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ. ಭಾರತದ ಪಾಲುದಾರ ಸಂಸ್ಥೆ ಮತ್ತು ಜಗತ್ತಿನ ದೊಡ್ಡ ಖಾಸಗಿ ಇಂಧನ ಕಂಪನಿಗಳಲ್ಲಿ ಒಂದಾದ ರಿಲಯನ್ಸ್‌ಗೆ ಧನ್ಯವಾದಗಳು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇಂಧನ ಉತ್ಪಾದನೆ ಹೆಚ್ಚಳ: ಬ್ರೌನ್ಸ್‌ವಿಲ್ಲೆ ಬಂದರಿನ ಸಮೀಪ ನಿರ್ಮಾಣವಾಗಲಿರುವ ಈ ಸಂಸ್ಕರಣಾ ಘಟಕ ಅಮೆರಿಕದ ಇಂಧನ ಮಾರುಕಟ್ಟೆಗೆ ದೊಡ್ಡ ಪ್ರಮಾಣದಲ್ಲಿ ಪೂರೈಕೆ ನೀಡಲಿದೆ. ಜೊತೆಗೆ ಇದು ದೇಶದ ಇಂಧನ ಭದ್ರತೆಯನ್ನು ಬಲಪಡಿಸುವುದರ ಜೊತೆಗೆ ಜಾಗತಿಕ ಇಂಧನ ರಫ್ತಿಗೂ ಉತ್ತೇಜನ ನೀಡಲಿದೆ ಎಂದು ಟ್ರಂಪ್ ಹೇಳಿದ್ದಾರೆ.
ಸಾವಿರಾರು ಉದ್ಯೋಗ ಸೃಷ್ಟಿ : ಈ ಮೆಗಾ ಯೋಜನೆಯಿಂದ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗುವ ಸಾಧ್ಯತೆ ಇದೆ. ಜೊತೆಗೆ ಸ್ಥಳೀಯ ಆರ್ಥಿಕತೆಯಿಗೂ ದೊಡ್ಡ ಉತ್ತೇಜನ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.
ಈ ಘಟಕವು ಪರಿಸರದ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಿಶ್ವದ ಅತ್ಯಂತ ಸ್ವಚ್ಛ ತೈಲ ಸಂಸ್ಕರಣಾಗಾರಗಳಲ್ಲಿ ಒಂದಾಗಲಿದೆ ಎಂದು ಟ್ರಂಪ್ ಹೇಳಿದ್ದಾರೆ.





















