ಭಾರತ–ಇಥಿಯೋಪಿಯಾ ದ್ವೈಪಕ್ಷಿಕ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಮಹತ್ವದ ಕ್ಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ರಾಷ್ಟ್ರದ ಅತ್ಯನ್ನತ ನಾಗರಿಕ ಪ್ರಶಸ್ತಿಯಾದ ‘ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ’ ಪ್ರದಾನ ಮಾಡಿ ಗೌರವಿಸಲಾಗಿದೆ.
ಅಡಿಸ್ ಅಬಾಬಾದಲ್ಲಿರುವ ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶೇಷ ಸಮಾರಂಭದಲ್ಲಿ, ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಪ್ರಧಾನಿ ಮೋದಿ ಅವರಿಗೆ ಈ ಗೌರವವನ್ನು ಅಧಿಕೃತವಾಗಿ ಪ್ರದಾನ ಮಾಡಿದರು. ಈ ಮೂಲಕ ಈ ಪ್ರಶಸ್ತಿಯನ್ನು ಸ್ವೀಕರಿಸಿದ ಮೊದಲ ಭಾರತೀಯ ಪ್ರಧಾನಿಯಾಗಿಯೂ, ಜಾಗತಿಕ ನಾಯಕನಾಗಿಯೂ ನರೇಂದ್ರ ಮೋದಿ ಗುರುತಿಸಿಕೊಂಡಿದ್ದಾರೆ.
ಜೋರ್ಡಾನ್‌ನೊಂದಿಗೆ ಐದು ಪ್ರಮುಖ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದ ನಂತರ ಇಥಿಯೋಪಿಯಾ ಪ್ರವಾಸ ಕೈಗೊಂಡಿದ್ದ ಪ್ರಧಾನಿ ಮೋದಿ ಅವರಿಗೆ ಈ ಗೌರವ ಲಭಿಸಿರುವುದು, ಭಾರತದ ಆಫ್ರಿಕಾ ನೀತಿ ಮತ್ತು ರಾಜತಾಂತ್ರಿಕ ಬಾಂಧವ್ಯದ ಮಹತ್ವವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ.
ಭಾರತ–ಇಥಿಯೋಪಿಯಾ ಸಂಬಂಧಕ್ಕೆ ಗೌರವ: ವಿದೇಶಾಂಗ ಕಾರ್ಯಾಲಯದ ಪ್ರಕಟಣೆಯಂತೆ, ಭಾರತ ಮತ್ತು ಇಥಿಯೋಪಿಯಾ ನಡುವಿನ ದೀರ್ಘಕಾಲೀನ ಸ್ನೇಹ, ಆರ್ಥಿಕ ಸಹಕಾರ, ಅಭಿವೃದ್ಧಿ ಪಾಲುದಾರಿಕೆ ಹಾಗೂ ಜಾಗತಿಕ ವೇದಿಕೆಯಲ್ಲಿ ಪರಸ್ಪರ ಸಹಕಾರವನ್ನು ಬಲಪಡಿಸಿದಲ್ಲಿ ಪ್ರಧಾನಿ ಮೋದಿ ಅವರ ಅಸಾಧಾರಣ ಕೊಡುಗೆಗಾಗಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ.
ಇದಲ್ಲದೆ, ಜಾಗತಿಕ ರಾಜಕಾರಣದಲ್ಲಿ ಪ್ರಧಾನಿ ಮೋದಿ ಅವರು ಪ್ರದರ್ಶಿಸಿರುವ ದೂರದೃಷ್ಟಿಯ ನಾಯಕತ್ವ, ಅಭಿವೃದ್ಧಿ ಆಧಾರಿತ ರಾಜತಾಂತ್ರಿಕ ನಿಲುವು ಮತ್ತು ದಕ್ಷಿಣ-ದಕ್ಷಿಣ ಸಹಕಾರಕ್ಕೆ ನೀಡಿರುವ ಒತ್ತುವರಿಗಳನ್ನು ಇಥಿಯೋಪಿಯಾ ಸರ್ಕಾರ ವಿಶೇಷವಾಗಿ ಮೆಚ್ಚಿದೆ ಎಂದು ತಿಳಿಸಲಾಗಿದೆ.
ಐತಿಹಾಸಿಕ ಕ್ಷಣ: ಇಥಿಯೋಪಿಯಾದ ಅತ್ಯುನ್ನತ ಗೌರವವನ್ನು ವಿದೇಶಿ ನಾಯಕನೊಬ್ಬರಿಗೆ ನೀಡಿರುವುದು ಅಪರೂಪದ ಸಂಗತಿಯಾಗಿದ್ದು, ಭಾರತ–ಆಫ್ರಿಕಾ ಸಂಬಂಧಗಳು ರಾಜತಾಂತ್ರಿಕ ಮಟ್ಟದಿಂದ ಮುಂದೆ ಹೋಗಿ ವ್ಯಾಪಾರ, ತಂತ್ರಜ್ಞಾನ, ಆರೋಗ್ಯ, ಶಿಕ್ಷಣ ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಹೊಸ ಹಂತಕ್ಕೆ ಪ್ರವೇಶಿಸುತ್ತಿರುವುದರ ಸಂಕೇತವೆಂದು ವಿಶ್ಲೇಷಿಸಲಾಗುತ್ತಿದೆ.
ಪ್ರಧಾನಿ ಮೋದಿ ಅವರು ಈ ಗೌರವವನ್ನು ಸ್ವೀಕರಿಸಿ, ಭಾರತದ ಜನತೆಗೆ ಹಾಗೂ ಇಥಿಯೋಪಿಯಾ ಸರ್ಕಾರ ಮತ್ತು ಜನತೆಗೆ ಕೃತಜ್ಞತೆ ಸಲ್ಲಿಸಿ, ಎರಡು ರಾಷ್ಟ್ರಗಳ ಸ್ನೇಹ ಮುಂದಿನ ದಿನಗಳಲ್ಲಿ ಇನ್ನಷ್ಟು ಗಾಢವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.









