ಶಾಶ್ವತ ಶಾಂತಿಗೆ ರಾಜತಾಂತ್ರಿಕ ಪ್ರಯತ್ನಗಳೇ ಏಕೈಕ ಮಾರ್ಗ: ಮೋದಿ ಪುನರುಚ್ಚಾರ
ರಷ್ಯಾ ಅಧ್ಯಕ್ಷ ವಾಡಿಮಿರ್ ಪುಟಿನ್ ಅವರ ಅಧಿಕೃತ ನಿವಾಸವನ್ನು ಗುರಿಯಾಗಿಸಿಕೊಂಡು ಉಕ್ರೇನ್ ದಾಳಿ ನಡೆಸಿದ ವರದಿಗಳ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧವನ್ನು ಅಂತ್ಯಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳೇ ಶಾಶ್ವತ ಶಾಂತಿಗೆ ಏಕೈಕ ದಾರಿ ಎಂಬ ತಮ್ಮ ನಿಲುವನ್ನು ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಅಧ್ಯಕ್ಷರ ನಿವಾಸದಂತಹ ಅತಿಸೂಕ್ಷ್ಮ ಹಾಗೂ ಸಂಕೇತಾತ್ಮಕ ಸ್ಥಳಗಳನ್ನು ಗುರಿಯಾಗಿಸುವ ಘಟನೆಗಳು ಆತಂಕಕಾರಿಯಾಗಿವೆ ಎಂದು ಹೇಳಿದ್ದಾರೆ. ಇಂತಹ ದಾಳಿಗಳು ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ಸಂವಾದದ ಪ್ರಯತ್ನಗಳನ್ನು ದುರ್ಬಲಗೊಳಿಸುವ ಅಪಾಯವಿದೆ ಎಂದು ಎಚ್ಚರಿಕೆ ನೀಡಿರುವ ಅವರು, ಸಂಘರ್ಷದಲ್ಲಿರುವ ಎಲ್ಲ ಪಕ್ಷಗಳು ಹಿಂಸೆಯ ದಾರಿಯನ್ನು ತೊರೆದು ಸಂಯಮ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಸಂವಾದವೇ ಪರಿಹಾರ: ಯುದ್ಧವು ಮುಂದುವರಿದಂತೆ ನಾಗರಿಕರ ಜೀವಕ್ಕೆ ಅಪಾಯ ಹೆಚ್ಚಾಗುತ್ತಿದ್ದು, ಪ್ರಾದೇಶಿಕ ಹಾಗೂ ಜಾಗತಿಕ ಸ್ಥಿರತೆಗೆ ಧಕ್ಕೆ ಉಂಟಾಗುತ್ತಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದಲೇ, ಎಲ್ಲ ಭಿನ್ನಾಭಿಪ್ರಾಯಗಳನ್ನು ಮಾತುಕತೆ, ಸಂವಾದ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕವೇ ಬಗೆಹರಿಸಬೇಕು ಎಂಬುದು ಭಾರತದ ಸ್ಥಿರ ನಿಲುವಾಗಿದೆ ಎಂದು ಅವರು ತಿಳಿಸಿದ್ದಾರೆ.
ಭಾರತದ ಸಮತೋಲನದ ನಿಲುವು: ಫೆಬ್ರವರಿ 2022ರಲ್ಲಿ ರಷ್ಯಾ–ಉಕ್ರೇನ್ ಯುದ್ಧ ಆರಂಭವಾದಾಗಿನಿಂದಲೇ ಭಾರತ ಸಮತೋಲನದ ಮತ್ತು ಜವಾಬ್ದಾರಿಯುತ ನಿಲುವು ಹೊಂದಿದೆ. ಪ್ರಧಾನಿ ಮೋದಿ ಹಲವು ಬಾರಿ ರಷ್ಯಾ ಅಧ್ಯಕ್ಷ ವಾಡಿಮಿರ್ ಪುಟಿನ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದೂರವಾಣಿ ಹಾಗೂ ಮುಖಾಮುಖಿ ಮಾತುಕತೆ ನಡೆಸಿ, ಯುದ್ಧ ವಿರಾಮ, ಮಾನವೀಯ ಸಹಾಯ ಮತ್ತು ಶಾಂತಿ ಮಾತುಕತೆಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಲೀದಾ ಜಿಯಾ ನಿಧನ
ಜಾಗತಿಕ ವೇದಿಕೆಗಳಲ್ಲಿಯೂ “ಇದು ಯುದ್ಧದ ಯುಗವಲ್ಲ” ಎಂಬ ಸಂದೇಶವನ್ನು ಮರುಮರು ಸಾರಿರುವ ಪ್ರಧಾನಿ ಮೋದಿ, ಇತ್ತೀಚಿನ ಘಟನೆಯ ಹಿನ್ನೆಲೆಯಲ್ಲಿಯೂ ಶಾಂತಿ ಸ್ಥಾಪನೆಗೆ ಸಂವಾದವೇ ಏಕೈಕ ಪರಿಹಾರ ಎಂಬುದನ್ನು ಪುನರುಚ್ಚಾರ ಮಾಡಿದ್ದಾರೆ.






















