ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಜಾಫರ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ನಡೆದ ಭಯಾನಕ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಈ ಘಟನೆ ಮಂಗಳವಾರ ಸಿಂಧ್–ಬಲೂಚಿಸ್ತಾನ್ ಗಡಿಯ ಸಮೀಪದ ಸುಲ್ತಾನ್‌ಕೋಟ್ ಪ್ರದೇಶದ ಬಳಿ ನಡೆದಿದೆ. ಕ್ವೆಟ್ಟಾಗೆ ತೆರಳುತ್ತಿದ್ದ ರೈಲಿನ ಹಳಿಗಳ ಕೆಳಗೆ ಅಳವಡಿಸಲಾಗಿದ್ದ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಗೊಂಡಿದ್ದು, ಪರಿಣಾಮವಾಗಿ ರೈಲಿನ ಆರು ಬೋಗಿಗಳು ಹಳಿ ತಪ್ಪಿವೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಯಿಂದ ರೈಲಿನ ಕೆಲವು ಬೋಗಿಗಳು ಸಂಪೂರ್ಣವಾಗಿ ಹಳಿ ತಪ್ಪಿವೆ, ಪ್ರಯಾಣಿಕರು ಭೀತಿಗೊಳಗಾದರು. ಸ್ಥಳಕ್ಕೆ ಭದ್ರತಾ ಪಡೆಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ರಕ್ಷಣಾ ತಂಡಗಳು ಧಾವಿಸಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಈ ದಾಳಿಯ ಹೊಣೆಯನ್ನು ಬಲೂಚ್ ರಿಪಬ್ಲಿಕ್ ಗಾರ್ಡ್ಸ್ (BRG) ಎಂಬ ಬಲೂಚಿಸ್ತಾನಿ ಬಂಡುಕೋರ ಸಂಘಟನೆ ಹೊತ್ತುಕೊಂಡಿದೆ. ಸಂಘಟನೆಯ ಪ್ರಕಟಣೆಯಲ್ಲಿ, “ಆಕ್ರಮಿತ ಪಾಕಿಸ್ತಾನಿ ಸೇನೆಯ ಸಿಬ್ಬಂದಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಅವರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಸ್ಫೋಟದಲ್ಲಿ ಹಲವರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ” ಎಂದು ತಿಳಿಸಿದೆ.
ಬಂಡುಕೋರರ ಸಂಘಟನೆ ತನ್ನ ಪ್ರಕಟಣೆಯಲ್ಲಿ ಇನ್ನಷ್ಟು ಸ್ಪಷ್ಟಪಡಿಸಿದ್ದು, “ಬಲೂಚಿಸ್ತಾನ ಸ್ವಾತಂತ್ರ್ಯ ಸಾಧಿಸುವವರೆಗೂ ಇಂತಹ ಕಾರ್ಯಾಚರಣೆಗಳು ಮುಂದುವರಿಯುತ್ತವೆ” ಎಂದು ಎಚ್ಚರಿಕೆ ನೀಡಿದೆ.
ಪಾಕಿಸ್ತಾನಿ ಸೇನೆ ಮತ್ತು ಗೃಹ ವ್ಯವಹಾರ ಸಚಿವಾಲಯದ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಘಟನೆಯ ಬಗ್ಗೆ ತನಿಖೆ ಆರಂಭವಾಗಿದೆ. ಪ್ರಾಥಮಿಕ ವರದಿಯ ಪ್ರಕಾರ, ಈ ದಾಳಿ ಬಲೂಚಿಸ್ತಾನದ ಸ್ವತಂತ್ರ ಹೋರಾಟದ ಭಾಗವಾಗಿ ನಡೆದ ಸಂಘಟಿತ ದಾಳಿ ಎಂದು ಶಂಕಿಸಲಾಗಿದೆ.
ಪಾಕಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ರೈಲು ಮಾರ್ಗ ಮತ್ತು ಸರ್ಕಾರಿ ಮೂಲಸೌಕರ್ಯಗಳ ಮೇಲೆ ದಾಳಿಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಬಲೂಚಿಸ್ತಾನ್ ಪ್ರಾಂತ್ಯವು ಬಂಡುಕೋರ ಚಟುವಟಿಕೆಗಳಿಂದ ತುಂಬಾ ತತ್ತರಿಸಿದೆ.