Home Advertisement
Home ಸುದ್ದಿ ವಿದೇಶ ವಿಮಾನ ಅಪಘಾತ: ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ – ಹಲವರಿಗೆ ಗಾಯ

ವಿಮಾನ ಅಪಘಾತ: ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ – ಹಲವರಿಗೆ ಗಾಯ

0
84

ನ್ಯೂಯಾರ್ಕ್ ನಗರದ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಭೀಕರ ವಿಮಾನ ಅವಘಡ ಸಂಭವಿಸಿದ್ದು, ಕೆನಡಾದ ಏರ್ ಕೆನಡಾ (Air Canada Express) ಸಂಸ್ಥೆಗೆ ಸೇರಿದ ವಿಮಾನವು ರನ್‌ವೇನಲ್ಲಿ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಹಲವರು ಗಾಯಗೊಂಡಿದ್ದಾರೆ.

ಮಾಂಟ್ರಿಯಲ್‌ನಿಂದ ಬಂದಿದ್ದ AC8646 ಸಂಖ್ಯೆಯ ವಿಮಾನವು ಲ್ಯಾಂಡಿಂಗ್ ಬಳಿಕ ನಿಯಂತ್ರಣ ಕಳೆದುಕೊಂಡು ರನ್‌ವೇ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ವಿಮಾನದ ಮುಂಭಾಗ (ಕಾಕ್‌ಪಿಟ್) ಭಾರೀ ಹಾನಿಗೊಳಗಾಗಿದ್ದು, ಮುಂಭಾಗ ಮೇಲಕ್ಕೆ ಎತ್ತಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಗಾಯಾಳುಗಳ ಸಂಖ್ಯೆ ಹೆಚ್ಚಳ : ಘಟನೆಯ ತೀವ್ರತೆಗೆ ಸಂಬಂಧಿಸಿದಂತೆ ಹೊಸ ಮಾಹಿತಿಗಳು ಹೊರಬಂದಿದ್ದು, ಸುಮಾರು 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಇವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನದಲ್ಲಿದ್ದ ಸುಮಾರು 100 ಪ್ರಯಾಣಿಕರು ಮತ್ತು 5 ಸಿಬ್ಬಂದಿಯ ಆರೋಗ್ಯ ತಪಾಸಣೆ ನಡೆಸಲಾಗಿದೆ.

ವಿಮಾನಕ್ಕೆ ಭಾರೀ ಹಾನಿ: ಈ ಅವಘಡದಲ್ಲಿ CRJ-900 ಮಾದರಿಯ ಜೆಟ್ ವಿಮಾನದ ಮುಂಭಾಗ ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಕಾಕ್‌ಪಿಟ್ ಭಾಗದಲ್ಲಿ ಗಂಭೀರ ಹಾನಿ ಸಂಭವಿಸಿದೆ. ಡಿಕ್ಕಿಯ ತೀವ್ರತೆಗೆ ವಿಮಾನದ ನೋಸ್ ಭಾಗ ಮೇಲಕ್ಕೆ ಎತ್ತಲ್ಪಟ್ಟಿದೆ.

ಅಗ್ನಿಶಾಮಕ ಸಿಬ್ಬಂದಿಗೆ ಗಂಭೀರ ಗಾಯ: ರನ್‌ವೇ ಮೇಲೆ ಕಾರ್ಯನಿರ್ವಹಿಸುತ್ತಿದ್ದ ಅಗ್ನಿಶಾಮಕ ವಾಹನದಲ್ಲಿದ್ದ ಸಿಬ್ಬಂದಿಗೆ ಗಂಭೀರ ಗಾಯಗಳಾಗಿದ್ದು, ಕೆಲವರ ಸ್ಥಿತಿ ಆತಂಕಕಾರಿಯಾಗಿದೆ. ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಗೊಂಡು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಮಾನ ನಿಲ್ದಾಣ ಕಾರ್ಯಾಚರಣೆ ಸ್ಥಗಿತ : ಅಪಘಾತದ ನಂತರ ಭದ್ರತಾ ಕ್ರಮವಾಗಿ ಲಾಗಾರ್ಡಿಯಾ ವಿಮಾನ ನಿಲ್ದಾಣದ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಹಲವು ವಿಮಾನಗಳು ರದ್ದುಗೊಂಡಿವೆ, ಕೆಲವು ವಿಮಾನಗಳನ್ನು ಇತರ ವಿಮಾನ ನಿಲ್ದಾಣಗಳಿಗೆ ಮರುನಿರ್ದೇಶಿಸಲಾಗಿದೆ

ತನಿಖೆ ಆರಂಭ: ಘಟನೆಯ ನಿಖರ ಕಾರಣ ತಿಳಿಯಲು ಅಮೆರಿಕದ ವಿಮಾನಯಾನ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಲ್ಯಾಂಡಿಂಗ್ ವೇಳೆ ತಾಂತ್ರಿಕ ದೋಷವೇ ಅಥವಾ ಮಾನವೀಯ ತಪ್ಪೇ ಕಾರಣ ಎಂಬುದನ್ನು ಪರಿಶೀಲಿಸಲಾಗುತ್ತಿದೆ.