ನವದೆಹಲಿ: ಫೆಬ್ರವರಿ 17ರಂದು ಬಿಎನ್‌ಪಿ ಪಕ್ಷದ ನಾಯಕ ತಾರಿಖ್ ರೆಹಮಾನ್ ಬಾಂಗ್ಲಾದೇಶದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ಗೈರು ಹಾಜರಾಗಲಿದ್ದಾರೆ. ಮೋದಿ ಬದಲಾಗಿ ಸ್ಪೀಕರ್ ಓಂ ಬಿರ್ಲಾ, ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಸಮಾರಂಭದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯದ ಮೂಲಗಳು ತಿಳಿಸಿವೆ.
ಈಗಾಗಲೇ ಸಮಾರಂಭದ ಆಹ್ವಾನ ಬಂದಿದ್ದು, ಆದರೆ ಮೋದಿ ಅದೇ ದಿನ ಫ್ರಾನ್ಸ್ ಅಧಕ್ಷ ಇಮಾನ್ಯುಯೆಲ್ ಮ್ಯಾಕ್ರನ್ ಜೊತೆಗೆ ಮುಂಬೈನಲ್ಲಿ ಮೊದಲೇ ನಿಗದಿಯಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮಕ್ಕೆ ಪಾಕಿಸ್ತಾನ, ಚೀನಾ ಸೇರಿ 13 ದೇಶದ ಅಧ್ಯಕ್ಷರುಗಳು ಹಾಗೂ ಇತರ ಗಣ್ಯರನ್ನು ಆಹ್ವಾನಿಸಲಾಗಿದೆ. ಪ್ರಾದೇಶಿಕ ರಾಷ್ಟ್ರಗಳ ಜೊತೆಗೆ ಸಂಬಂಧ ಬಲಪಡಿಸುವ ದೃಷ್ಟಿಯಿಂದ ಆಯ್ದ ದೇಶಗಳಿಗೆ ಆಹ್ವಾನ ನೀಡಲಾಗಿದೆ.
ದಶಕಗಳಷ್ಟು ಹಳೆಯ ಸಂಪ್ರದಾಯವನ್ನು ಮುರಿದು ಪ್ರಮಾಣವಚನ ಕಾರ್ಯಕ್ರಮವನ್ನು ದರ್ಬಾರ್ ಹಾಲ್ ಬದಲು ರಾಷ್ಟ್ರೀಯ ಸಂಸತ್ತಿನ ದಕ್ಷಿಣ ಪ್ಲಾಜಾದಲ್ಲಿ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಪ್ರಮಾಣ ಬೋಧಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಭಾರತದ ಸ್ಪೀಕರ್ ಪಾಲ್ಗೊಳ್ಳುತ್ತಿರುವುದು ಎರಡೂ ದೇಶದ ನಡುವಿನ ಬಾಂಧವ್ಯಕ್ಕೆ ನೀಡಿರುವ ಮಹತ್ವವನ್ನು ಸಾರುತ್ತದೆ. ಇದು ಪ್ರಜಾಪ್ರಭುತ್ವ ಮೌಲ್ಯಕ್ಕೆ ಇರುವ ಬದ್ಧತೆಯನ್ನು ಸಾರುತ್ತದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.























