ಶಿಮ್ಲಾ: ಕಳೆದ ರಾತ್ರಿ ಹಿಮಾಚಲ ಪ್ರದೇಶದಲ್ಲಿ ಸುರಿದ ಧಾರಾಕಾರ ಮಳೆ ಪ್ರವಾಹ ಮತ್ತು ಸರಣಿ ಭೂಕುಸಿತಕ್ಕೆ ಕಾರಣವಾಗಿದ್ದು, ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೆ, ಮಂಡಿಯಲ್ಲಿ ಬಸ್ ನಿಲ್ದಾಣವೊಂದು ಜಲಾವೃತಗೊಂಡು ಅಪಾರ ನಷ್ಟ ಸಂಭವಿಸಿದೆ. ಮಂಡಿ ಜಿಲ್ಲೆಯ ಸುಂದರ್‌ನಗರ ಉಪವಿಭಾಗದ ನೆಹ್ರ ಪ್ರದೇಶದ ಬೊಯ್ ಗ್ರಾಮದಲ್ಲಿ ಸಂಭವಿಸಿದ ಭಾರೀ ಭೂಕುಸಿತದಿಂದ ಮನೆ ಕುಸಿದು ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.
ಘಟನೆಯಲ್ಲಿ ಸಿಲುಕಿಕೊಂಡಿದ್ದ ಮೂರು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಅದೃಷ್ಟವಶಾತ್ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಿದೆ ಎಂದು ಮಂಡಿ ಜಿಲ್ಲಾಧಿಕಾರಿ ಅಪೂರ್ವ ದೇವಗನ್ ತಿಳಿಸಿದ್ದಾರೆ. ಮಂಡಿಯಲ್ಲಿ ಬಸ್ ನಿಲ್ದಾಣ ಮುಳುಗಡೆ, 20ಕ್ಕೂ ಹೆಚ್ಚು ಬಸ್ಸುಗಳಿಗೆ ಹಾನಿ ನಿರಂತರ ಮಳೆಯಿಂದಾಗಿ ಮಂಡಿಯ ಸೋನ್ ಮತ್ತು ಭದ್ರಾ ಕಾಲುವೆಗಳು ಉಕ್ಕಿ ಹರಿದಿದ್ದು, ಧರ್ಮಪುರಿ ಬಸ್ ನಿಲ್ದಾಣ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಈ ಅನಿರೀಕ್ಷಿತ ಪ್ರವಾಹದಿಂದ ಕಾರ್ಯಾಗಾರ, ಪಂಪ್ ಹೌಸ್, ಹಲವಾರು ಅಂಗಡಿಗಳು ಹಾಗೂ ಇಪ್ಪತ್ತಕ್ಕೂ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಿಗೆ ಹಾನಿಯಾಗಿದೆ. ‘ನಮ್ಮ ಧರ್ಮಪುರಿ ಬಸ್ ನಿಲ್ದಾಣದಲ್ಲಿ ಎರಡು ಡಜನ್‌ಗೂ ಅಧಿಕ ಎಚ್‌ಆರ್‌ಟಿಸಿ ಬಸ್‌ಗಳು, ಅಂಗಡಿಗಳು, ಪಂಪ್ ಹೌಸ್ ಮತ್ತು ಕಾರ್ಯಾಗಾರಕ್ಕೆ ಭಾರೀ ಹಾನಿಯಾಗಿದೆ’ ಎಂದು ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಘಟನೆಯ ತೀವ್ರತೆಯನ್ನು ವಿವರಿಸಿದ್ದಾರೆ.
ರಾಜಧಾನಿ ಶಿಮ್ಲಾದಲ್ಲೂ ಭೂಕುಸಿತ, ಜನಜೀವನ ಅಸ್ತವ್ಯಸ್ತ ರಾಜಧಾನಿ ಶಿಮ್ಲಾದಲ್ಲಿರುವ ಪ್ರಸಿದ್ಧ ಹಿಮ್‌ಲ್ಯಾಂಡ್ ಹೋಟೆಲ್ ಸಮೀಪವೂ ಭಾರಿ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿಯಲ್ಲಿ ಸಿಲುಕಿವೆ. ಹಲವಾರು ರಸ್ತೆಗಳು ಬಂದ್ ಆಗಿದ್ದು, ಶಾಲೆ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿದೆ.
ಹಿಮಾಚಲ ನೆರವಿಗೆ ನಿಂತ ಕರ್ನಾಟಕ: 5 ಕೋಟಿ ರೂ. ನೆರವು ಘೋಷಣೆ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಹಿಮಾಚಲ ಪ್ರದೇಶದ ಸಂಕಷ್ಟಕ್ಕೆ ಕರ್ನಾಟಕ ಸರ್ಕಾರ ಸ್ಪಂದಿಸಿದೆ. ರಾಜ್ಯದ ಪ್ರಕೃತಿ ವಿಕೋಪ ನಿಧಿಗೆ 5 ಕೋಟಿ ರೂಪಾಯಿ ನೆರವನ್ನು ಘೋಷಿಸಿದೆ. ಈ ಕುರಿತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರಿಗೆ ಪತ್ರ ಬರೆದಿದ್ದು, ಅದನ್ನು ಸಾಮಾಜಿಕ ಮಾಧ್ಯಮದಲ್ಲಿಯೂ ಹಂಚಿಕೊಂಡಿದ್ದಾರೆ.
‘ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೀಕರ ಪ್ರವಾಹಕ್ಕೆ ಅಮೂಲ್ಯ ಜೀವಗಳು ಬಲಿಯಾಗಿವೆ ಮತ್ತು ಅಪಾರ ಆಸ್ತಿ ಹಾನಿ ಸಂಭವಿಸಿದೆ. ಈ ಸಂಕಷ್ಟದ ಸಮಯದಲ್ಲಿ ಕರ್ನಾಟಕದ ಜನರು ನಿಮ್ಮೊಂದಿಗೆ ನಿಲ್ಲುತ್ತಾರೆ. ಬೆಂಬಲದ ಸಂಕೇತವಾಗಿ, ನಮ್ಮ ಸರ್ಕಾರ ವಿಪತ್ತು ಪರಿಹಾರ ಮತ್ತು ಪುನರ್ವಸತಿಗಾಗಿ 5 ಕೋಟಿ ರೂಪಾಯಿ ನೆರವು ನೀಡಿದೆ’ ಎಂದು ಸಿದ್ದರಾಮಯ್ಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪ್ರಾಕೃತಿಕ ವಿಕೋಪಗಳು ಸಂಭವಿಸಿದಾಗ ಒಗ್ಗಟ್ಟಾಗಿ ಎದುರಿಸಬೇಕು. ಈ ಕಷ್ಟದ ಸಂದರ್ಭದಲ್ಲಿ ನಾವು ಹಿಮಾಚಲ ಪ್ರದೇಶದ ಜನರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತೇವೆ ಎಂದು ಕರ್ನಾಟಕದ ಸಿಎಂ ತಮ್ಮ ಪತ್ರದಲ್ಲಿ ಭರವಸೆ ನೀಡಿದ್ದಾರೆ.